ಮಂಗಳೂರು: ಶರವೇಗದ ಓಟದ ಮೂಲಕ ಸಂಚಲನ ಸೃಷ್ಟಿಸಿರುವ ತುಳುನಾಡಿನ ಕಂಬಳ ಹೀರೋ ಶ್ರೀನಿವಾಸ ಗೌಡ ದಾಖಲೆಯನ್ನು ಮುರಿಯುವ ಮೂಲಕ ಭಾರತದಲ್ಲಿ ಮತ್ತೋರ್ವ ಉಸೇನ್ ಬೋಲ್ಟ್ ಉದ್ಭವಿಸಿದ್ದಾನೆ! 100 ಮೀಟರ್ ದೂರವನ್ನು 9.55 ಸೆಕೆಂಡ್ಗಳಲ್ಲಿ ತಲುಪಿದ್ದ ಮಿಜರಾರು ಶ್ರೀನಿವಾಸ ಗೌಡ ಅವರ ದಾಖಲೆಯನ್ನು ಪುಡಿಗಟ್ಟಿರುವ ಬಜಗೋಳಿಯ ಜೋಗಿಬೆಟ್ಟು ನಿಶಾಂತ್ ಶೆಟ್ಟಿ 9.52 ಸೆಕೆಂಡ್ಗಳಲ್ಲೇ ಈ ಸಾಧನೆ ಮಾಡಿದ್ದಾರೆ. ಫೆ.15, 16ರಂದು ನಡೆದ ವೇಣೂರು ಕಂಬಳ ಈ ಹೊಸ ದಾಖಲೆಗೆ ಸಾಕ್ಷಿಯಾಗಿದೆ. ದ್ವಿತೀಯ ಪಿಯುಸಿವರೆಗೆ ಓದಿರುವ ನಿಶಾಂತ್ ವೃತ್ತಿಯಲ್ಲಿ ಕೃಷಿಕ. ತಂದೆ ಕಂಬಳ ಓಟಗಾರನಾಗಿದ್ದರಿಂದ ಅವರಿಂದಲೇ ಮೊದಲ ತರಬೇತಿ ಪಡೆದಿದ್ದರು. ಬಳಿಕ ಗುಣಪಾಲ ಕಡಂಬ ನೇತೃತ್ವದ ಕಂಬಳ ಅಕಾಡೆಮಿಯಲ್ಲಿ ಪರಿಪೂರ್ಣ ತರಬೇತಿ ಸಿಕ್ಕಿತ್ತು. 6 ವರ್ಷಗಳಿಂದ ಹಗ್ಗ ಹಿರಿಯ ವಿಭಾಗದಲ್ಲಿ ಕೋಣಗಳನ್ನು ಓಡಿಸುತ್ತಿರುವ ಇವರು, ಇದುವರೆಗೆ 40 ಪದಕಗಳನ್ನು ಗೆದ್ದಿದ್ದಾರೆ. ಈ ಸಾಲಿನಲ್ಲಿ ಒಂದು ಚಿನ್ನ, ಮೂರು ಬೆಳ್ಳಿ ಪದಕ ಲಭಿಸಿವೆ.
ಎರಡು ದಾಖಲೆಗಳು
ವೇಣೂರು ಕಂಬಳದಲ್ಲಿ ಶ್ರೀನಿವಾಸ ಗೌಡ 143 ಮೀ. ಉದ್ದದ ಕೆರೆಯಲ್ಲಿ 13.68 ಸೆಕೆಂಡ್ಗಳಲ್ಲಿ ನೇಗಿಲು ಹಿರಿಯ ವಿಭಾಗದಲ್ಲಿ ಕೋಣಗಳನ್ನು ಓಡಿಸಿದ್ದರು. ಅಂದರೆ ಇದನ್ನು 100 ಮೀ.ಗೆ ಲೆಕ್ಕಿಸಿದಾಗ 9.55 ಸೆಕೆಂಡ್ ಎಂದಾಗುತ್ತದೆ.
143 ಮೀಟರ್ ಉದ್ದದ ಕಂಬಳ ಕೆರೆಯಲ್ಲಿ ನಿಶಾಂತ್ ಹಿರಿಯ ವಿಭಾಗದ ಸೆಮಿಫೈನಲ್ನಲ್ಲಿ ಪಾಲ್ಗೊಂಡು ಕೋಣಗಳನ್ನು 13.61 ಸೆಕೆಂಡ್ಗಳಲ್ಲಿ ಓಡಿಸಿದ್ದರು. ಆದರೆ ಇದೇ ಫಲಿತಾಂಶ ಫೈನಲ್ನಲ್ಲಿ ಪುನರಾವರ್ತಿ ಸಲು ಕೋಣಗಳು ಸಹಕರಿಸದ ಕಾರಣ ಸಾಧ್ಯವಾಗಿಲ್ಲ.
ನನ್ನ ಓಟ ದಾಖಲೆ ಎಂದು ತೀರ್ಪಗಾರರು ತಿಳಿಸಿದ್ದಾರೆ. ಆದರೆ ಇದಕ್ಕಿಂತಲೂ ವೇಗವಾಗಿ ಕೆಲವೊಮ್ಮೆ ಓಡಿರುತ್ತೇವೆ, ಅದರ ದಾಖಲೆ ಆಗಿಲ್ಲ. ಕಂಬಳದ ಓಟವನ್ನು ಟ್ರ್ಯಾಕ್ ಓಟಕ್ಕೆ, ಉಸೇನ್ ಬೋಲ್ಟ್ಗೆ ಹೋಲಿಸುವುದು ಸರಿಯಲ್ಲ. ನಮಗೆ ಇದೇ ಫಲಿತಾಂಶವನ್ನು ಟ್ರ್ಯಾಕ್ನಲ್ಲಿ ಸಾಬೀತುಪಡಿಸಲು ಸಾಧ್ಯವಿಲ್ಲ. | ಬಜಗೋಳಿ ನಿಶಾಂತ್ ಶೆಟ್ಟಿ ಕಂಬಳ ಓಟಗಾರ