ಹುಬ್ಬಳ್ಳಿ: ಇಲ್ಲಿಯ ಉಣಕಲ್ನ ಅಚ್ಚವ್ವನ ಕಾಲನಿಯಲ್ಲಿ ಡಿ. 23ರಂದು ಬೆಳಗ್ಗೆ ಸಂಭವಿಸಿದ್ದ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಮಾಲಾಧಾರಿಗಳ ಪೈಕಿ ಮಂಗಳವಾರ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಕೆಎಂಸಿಆರ್‌ಐನಲ್ಲಿ ಮೃತಪಟ್ಟಿದ್ದು, ಮೃತರ ಸಂಖ್ಯೆ 8 ಕ್ಕೆ ಏರಿಕೆಯಾಗಿದೆ.
ಪ್ರಕಾಶ ಬಾರಕೇರ (42) ಮೃತರು. ಸೋಮವಾರ ಸಂಜೆ ತೇಜಸ್ ಸುತಾರೆ (26) ಮೃತಪಟ್ಟಿದ್ದರು. ಪ್ರಕಾಶ ಬಾರಕೇರ ಪುತ್ರ ವಿನಾಯಕ ಬಾರಕೇರ (12) ಚೇತರಿಸಿಕೊಳ್ಳುತ್ತಿದ್ದಾನೆ.
ಸಿಲಿಂಡರ್ ಸ್ಫೋಟದಿಂದ ಒಟ್ಟು 9 ಜನರಲ್ಲಿ 8 ಮಾಲಾಧಾರಿಗಳು ತೀವ್ರವಾಗಿ ಗಾಯಗೊಂಡಿದ್ದರು. ತೀವ್ರವಾಗಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಬೆಂಗಳೂರಿನ ವಿಕ್ಟೋರಿಯಾ, ಬಿಎಂಸಿಆರ್‌ಐ ಹಾಗೂ ಧಾರವಾಡ ಎಸ್‌ಡಿಎಂ ಆಸ್ಪತ್ರೆಯ ತಜ್ಞ ವೈದ್ಯರನ್ನು ಕರೆಯಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಇದುವರೆಗೆ ಒಟ್ಟು 8 ಜನ ಮಾಲಾಧಾರಿಗಳು ಮೃತಪಟ್ಟಿದ್ದಾರೆ.
ಪ್ರಕಾಶ ಬಾರಕೇರ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟ ಹಿನ್ನೆಲೆಯಲ್ಲಿ ಕೆಎಂಸಿಆರ್‌ಐ ಶವಾಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನಮ್ಮ ಮಗ ಬದುಕಿ ಬರ್ತಾನೆ ಅಂತಾ ಮಾಡಿದ್ದೆ. ಆದರೆ ಬದುಕಿ ಬರಲಿಲ್ಲ. ಅಯ್ಯಪ್ಪ ಸ್ವಾಮಿ ಅವನ್ನನ್ನು ಕರೆದುಕೊಂಡು ಬಿಟ್ಟ ಎಂದು ಪ್ರಕಾಶ ಬಾರಕೇರ ತಾಯಿ ಕಣ್ಣೀರು ಹಾಕಿದರು.