ಜಿಲ್ಲೆ

ಮಕ್ಕಳಿಗಾಗಿ ಮನೆಯಲ್ಲಿ ಸಮಯ ಮೀಸಲಿಡಿ...

ಪಾಲಕ ಸಮುದಾಯಕ್ಕೆ ಡಾ.ಶಿಲ್ಪಾ ಜೋಶಿ ಕಿವಿಮಾತು

ಇಂದ್ರಾಳಿ ಇಂಗ್ಲಿಷ್​ ಮೀಡಿಯಂ ಸ್ಕೂಲ್​ ವಾರ್ಷಿಕೋತ್ಸವ

ವಿಜಯವಾಣಿ ಸುದ್ದಿಜಾಲ ಉಡುಪಿ

ಮಕ್ಕಳ ಮೇಲಿನ ಹೊರೆಯಿಂದ ನುಣುಚಿಕೊಳ್ಳಲು ಎಲ್ಲವನ್ನೂ ಶಿಕ್ಷಕರ ಮೇಲೆ ಹೊರಿಸಬಾರದು. ಇಂತಹ ಮನೋಭಾವದಿಂದ ಹೊರಬಂದು, ಮಕ್ಕಳಿಗಾಗಿ ಸಮಯ ಮೀಸಲಿಡಬೇಕು. ಯಾವುದೇ ಜಾತಿ-ಧರ್ಮದವರಾದರೂ ಮನೆಯಲ್ಲಿಯೇ ಸಂಸ್ಕಾರ ನೀಡಬೇಕು ಎಂದು ಪಾಲಕ ಸಮೂಹಕ್ಕೆ ಮಾಹೆಯ ವಿದ್ಯಾರ್ಥಿ ಸಲಹೆಗಾರ್ತಿ ಡಾ.ಶಿಲ್ಪಾ ಜೋಶಿ ಕಿವಿಮಾತು ಹೇಳಿದರು.

ಶಾಲೆಯ ಪ್ರಾಂಶುಪಾಲೆ ರೇಶ್ಮಾ ಪ್ರಭು ವಾರ್ಷಿಕ ವರದಿ ವಾಚಿಸಿದರು.

ಉಡುಪಿಯ ಇಂದ್ರಾಳಿ ಇಂಗ್ಲಿಷ್​ ಮೀಡಿಯಂ ಸ್ಕೂಲ್​ನಲ್ಲಿ ಗುರುವಾರ ಆಯೋಜಿಸಿದ್ದ ಶಾಲೆಯ 40ನೇ ವರ್ಷದ ಸಂಸ್ಥಾಪಕರ ದಿನ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳಿಗೆ ಸಣ್ಣಪುಟ್ಟ ಜವಾಬ್ದಾರಿ ನೀಡಿ

ನಿತ್ಯದ ಎಲ್ಲ ತಾಪತ್ರಯ ಬದಿಗಿಟ್ಟು ಮಕ್ಕಳೊಂದಿಗೆ ಕೆಲಕಾಲ ಮಾತನಾಡಿ. ಅವರನ್ನು ಕೀಳರಿಮೆಯಿಂದ ನೋಡಬೇಡಿ. ಬೇರೆ ವಿದ್ಯಾರ್ಥಿಗಳೊಂದಿಗೆ ಹೋಲಿಸಿ ಮೂದಲಿಸಬೇಡಿ. ಕಡಿಮೆ ಅಂಕ ಬಂತೆಂದು ಹಿಂಸಿಸಬೇಡಿ. ಬೆಳೆಯುವಾಗಲೇ ಎಲ್ಲ ವಿಧದ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ, ಅವರಿಗೂ ಮನೆಯ ಸಣ್ಣ-ಪುಟ್ಟ ಕೆಲಸಗಳ ಜವಾಬ್ದಾರಿ ಹಂಚಿಕೆ ಮಾಡಿ ಎಂದು ಡಾ.ಶಿಲ್ಪಾ ಜೋಶಿ ಸಲಹೆ ನೀಡಿದರು.

ಶಾಲೆಯಲ್ಲಿ ಸಂಸ್ಕಾರಯುತ ಶಿಕ್ಷಣ

ಪಾಲಕ-ಶಿಕ್ಷಕ ಸಂದ ಅಧ್ಯಕ್ಷ ದಿನೇಶ್​ ಹೆಗ್ಡೆ ಆತ್ರಾಡಿ ಮಾತನಾಡಿ, ಶಾಲೆಯಲ್ಲಿ ಶಿಕ್ಷಣದೊಂದಿಗೆ ಮಕ್ಕಳಿಗೆ ಉತ್ತಮವಾದ ಸಂಸ್ಕಾರವನ್ನೂ ನೀಡುತ್ತಿದ್ದಾರೆ. ಒಳ್ಳೆಯ ಶಿಕ್ಷಕ ವೃಂದವೂ ಇಲ್ಲಿದ್ದು, ನಮ್ಮ ಮಕ್ಕಳಿಗೆ ಉತ್ತಮ ಜ್ಞಾನ ಲಭಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ ಚಿಗುರು ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ಸಂಚಾಲಕ ಕೆ.ಅಣ್ಣಪ್ಪ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಪ್ರಾಂಶುಪಾಲೆ ರೇಶ್ಮಾ ಪ್ರಭು ವಾರ್ಷಿಕ ವರದಿ ವಾಚಿಸಿದರು.

ಆಡಳಿತ ಮಂಡಳಿ ಸದಸ್ಯ ರತ್ನಾಕರ್​ ಶೆಣೈ, ಹಳೆಯ ವಿದ್ಯಾರ್ಥಿ ಸಂದ ಅಧ್ಯಕ್ಷ ಪಿ.ನಟರಾಜ್​ ಪ್ರಭು, ಪ್ರೌಢಶಾಲೆಯ ಪ್ರಾಂಶುಪಾಲ ವಿನಾಯಕ ಕಿಣಿ ಉಪಸ್ಥಿತರಿದ್ದರು.

ವಿದ್ಯಾರ್ಥಿ ನಾಯಕ ಸುಪ್ರಜ್​ ವಂದಿಸಿದರು. ವಿದ್ಯಾರ್ಥಿಗಳಾದ ರೀಮಾ ರಾವ್​, ಅಭಿರಾಮ್​ ಪಲಿಮಾರು ಕಾರ್ಯಕ್ರಮ ನಿರೂಪಿಸಿದರು. ಸಭೆಯ ಬಳಿಕ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ವಿದ್ಯಾರ್ಥಿಗಳಾದ ಸಮರ್ಥ್​ ಹಾಗೂ ನಿಮ್ರಾ ಫಾತಿಮಾ ಕಾರ್ಯಕ್ರಮ ನಿರ್ವಹಿಸಿದರು.

ವಿದ್ಯಾರ್ಥಿಗಳಿಗೆ ಶಾಲೆ ಎರಡನೇ ಮನೆ. ಹೀಗಾಗಿ ಶಿಕ್ಷಕಿಯರು ಇಲ್ಲಿ ತಾಯಂದಿರ ಪಾತ್ರ ನಿರ್ವಹಿಸಬೇಕು. ಮಕ್ಕಳಲ್ಲಿ ದೈಹಿಕ, ಮಾನಸಿಕ ಸ್ಥೈರ್ಯ ಮೂಡಿಸುವುದು ಶಿಕ್ಷಕರಾದವರಿಗೆ ತಾಯಿಯ ನೆಲೆಯಲ್ಲಿ ಜವಾಬ್ದಾರಿ ಇದೆ. ಪಾಲಕರೂ ಸಹ ಹೊಣೆಗಾರಿಕೆ ನಿಭಾಯಿಸಬೇಕು. | ಡಾ. ಶಿಲ್ಪಾ ಜೋಶಿ. ವಿದ್ಯಾರ್ಥಿ ಸಲಹೆಗಾರ್ತಿ, ಮಾಹೆ