ಜಿಲ್ಲೆ

ಗೊಲ್ಲ ಜನಾಂಗದ ವಾರ್ಷಿಕ ಕ್ರೀಡಾಕೂಟ

ನಾಪೋಕ್ಲು: ತನ್ನದೇ ಆದ ಆಚಾರ, ವಿಚಾರ, ಸಂಸ್ಕೃತಿ, ಸಂಪ್ರದಾಯಗಳನ್ನು ರೂಢಿಸಿಕೊಂಡಿರುವ ಗೊಲ್ಲ ಜನಾಂಗದವರ ವಾರ್ಷಿಕ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಹೆಮ್ಮೆ ಎನಿಸಿದೆ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.

ಕೊಡಗು ಜಿಲ್ಲಾ ಗೊಲ್ಲ ಸಮಾಜದ ವತಿಯಿಂದ ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಗುರುವಾರ ಆರಂಭಗೊಂಡ 2024-25ನೇ ಸಾಲಿನ ವಾರ್ಷಿಕ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಜಿಲ್ಲೆಯಲ್ಲಿ ಸಣ್ಣ-ಸಣ್ಣ ಸಮುದಾಯದವರು ವ್ಯವಸ್ಥಿತವಾಗಿ ಕ್ರೀಡಾಕೂಟವನ್ನು ಸಂಘಟಿಸುತ್ತಿರುವುದು ಸಂತಸದ ವಿಚಾರ. ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿರುವ ಸಣ್ಣ-ಸಣ್ಣ ಸಮುದಾಯದವರು ತಮ್ಮದೇ ಆದ ಸಂಸ್ಕೃತಿ, ಉಡುಪು, ಭಾಷೆ, ಆಚಾರ ವಿಚಾರಗಳನ್ನು ಹೊಂದಿದ್ದಾರೆ. ಅವುಗಳನ್ನು ಕಾಪಾಡುವ ಕೆಲಸ ಆಗಬೇಕಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ವಿವಿಧ ಸಮುದಾಯಗಳ ಕ್ರೀಡಾಕೂಟಗಳು ಜರುಗುತ್ತಿವೆ. ಕ್ರೀಡಾಕೂಟಗಳ ಮೂಲಕ ಸಂಘಟನೆ ಸಾಧ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ಜನಾಂಗದವರ ಕಾರ್ಯಕ್ರಮಗಳಿಗೆ ತಾನು ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.

ಗೊಲ್ಲ ಸಮಾಜದ ಪ್ರಮುಖರುಸಮಾಜದ ಬೇಡಿಕೆಗಳ ಮನವಿಯನ್ನು ಶಾಸಕರಿಗೆ ಸಲ್ಲಿಸಿದರು. ಇದೇ ಸಂದರ್ಭ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಜಿಲ್ಲಾ ಗೊಲ್ಲ ಸಮಾಜದ ಅಧ್ಯಕ್ಷ ಅರೆಯಂಡ ಎ ಭೀಮಯ್ಯ, ಕ್ರೀಡಾ ಸಮಿತಿ ಅಧ್ಯಕ್ಷ ತುತ್ತಿಯಂಡ ಅಜಿತ್ ನಾಣಯ್ಯ, ನಿವೃತ್ತ ಸೈನಿಕ ಕೈಬ್ಲಿರ ಎಂ ಭೀಮಯ್ಯ, ಕಾಫಿ ಬೆಳೆಗಾರ ಉದ್ದಮಾಡಟಡ ಕೆ ಕಾಶಿ ಭೀಮಯ್ಯ, ಚೋಕಿರ ವಾಸುದೇವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಸಂಪನ್ ಅಯ್ಯಪ್ಪ, ಕ್ರೀಡಾಕೂಟದ ಸಮಿತಿ ಪದಾಧಿಕಾರಿಗಳು ಜನಾಂಗದವರು ಇದ್ದರು.=========