ಜಿಲ್ಲೆ

ಎಗ್ಗಿಲ್ಲದೆ ನಡೆಯುತ್ತಿರುವ ಅರಣ್ಯನಾಶ: ಅಲಯನ್ಸ್‌ನ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಬೇಸರ

ಕೆ.ಎನ್.ರಾಘವೇಂದ್ರ

ಮಂಡ್ಯ: ಇತೀಚಿನ ದಿನದಲ್ಲಿ ಅರಣ್ಯನಾಶ ಎಗ್ಗಿಲ್ಲದೆ ನಡೆಯುತ್ತಿದೆ. ಪರಿಣಾಮ ಮರಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿವೆ. ಸಾಕಷ್ಟು ಪಕ್ಷಿಗಳು ಕಣ್ಮರೆಯಾಗುತ್ತಿವೆ. ಇನ್ನೊಂದೆಡೆ ತಾಪಮಾನ ಹೆಚ್ಚಾಗುತ್ತಿದೆ. ಅತಿವೃಷ್ಠಿ, ಅನಾವೃಷ್ಟಿ ಉಂಟಾಗಿ ಅಪಾರ ಪ್ರಮಾಣದಲ್ಲಿ ಸಾವು ನೋವು ಸಂಭವಿಸುತ್ತಿವೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಆತಂಕ ವ್ಯಕ್ತಪಡಿಸಿದರು.

ತಾಲೂಕಿನ ಕೆರಗೋಡು ಗ್ರಾಮದ ಪಂಚಲಿಂಗೇಶ್ವರ ದೇವಾಲಯ ಆವರಣದಲ್ಲಿ ಮಂಡ್ಯ ನಗರದ ಮಹಿಳಾ ಸರ್ಕಾರಿ ಕಾಲೇಜು(ಸ್ವಾಯತ್ತ) ಹಾಗೂ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ಸಹಯೋಗದಲ್ಲಿ ಆಯೋಜಿಸಿದ್ದ ವಾರ್ಷಿಕ ಶ್ರಮದಾನ ಶಿಬಿರದಲ್ಲಿ 50ಕ್ಕೂ ಹೆಚ್ಚು ಔಷಧ ಸಸಿ ನೆಡುವುದು ಮತ್ತು ಕೊಳ ಸ್ವಚ್ಚತೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಪ್ರತಿ ಗ್ರಾಮದಲ್ಲೊಂದು ದೇವರಕಾಡು ನಿರ್ಮಾಣದ ಅವಶ್ಯಕವಿದೆ ಎಂದರು.

ನಾಶವಾದ ಅರಣ್ಯವನ್ನು ಮರುಸೃಷ್ಠಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಪ್ರಕೃತಿ ಸಮತೋಲನ ಮತ್ತು ಶುದ್ಧಗಾಳಿ ನೆರಳಿಗೆ ಪ್ರತಿ ಗ್ರಾಮಕ್ಕೆ ಒಂದೊಂದು ದೇವರಕಾಡು ನಿರ್ಮಾಣ ಮಾಡುವುದು ಅನಿವಾರ್ಯವಾಗಿದೆ, ಸಂಘ ಸಂಸ್ಥೆ, ಆಯಾಯ ಗ್ರಾಮಗಳ ಯುವಜನತೆ ಮುಖಂಡರು ಒಗ್ಗೂಡಿ ಪರಿಸರ ಪ್ರಜ್ಞೆ, ಗ್ರಾಮಾಭಿವೃದ್ದಿಯ ಕಾಳಜಿ ಹೆಚ್ಚಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.

ದೇವಾಲಯದ ಆವರಣ, ಪಾಳುಬಿದ್ದ ಜಾಗ, ಕೆರೆಯಂಗಳ, ಕೆರೆಏರಿಗಳಲ್ಲಿ ದೇವರ ಕಾಡು ಎಂಬ ಹೆಸರಿನಲ್ಲಿ ಔಷಧ ಸಸ್ಯ ನೆಡುವುದು. ಅರಳಿ, ಬೇವು, ಮಾವು, ಹೊಂಗೆ, ಬ್ಯಾಲ, ಬಿಲ್ಪತ್ರೆ, ಹಲಸು ಹೀಗೆ ನೂರಾರು ಗಿಡ ನೆಟ್ಟು ಪೋಷಿಸುವುದು, ಅನಿವಾರ್ಯ ಸ್ಥಳದಲ್ಲಿ ಮಳೆನೀರಿನಲ್ಲಿ ಬೆಳೆಸುವ ವ್ಯವಸ್ಥೆಗೆ ಮುಂದಾಗಬೇಕು. ಅಶುದ್ಧ ಗಾಳಿಯಿಂದ ದೆಹಲಿ, ಬೆಂಗಳೂರು ಸೇರಿದಂತೆ ಮಹಾನಗರ ತತ್ತರಿಸುತ್ತಿವೆ. ಜನರು ಅನೇಕ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಇಂತಹ ಅನಾಹುತದ ನಿಯಂತ್ರಣಕ್ಕಾಗಿ ಮತ್ತು ಮುಂದಿನ ಪೀಳೆಗೆಯ ಭವಿಷ್ಯಕ್ಕಾಗಿ ಗಿಡ ನೆಟ್ಟು ಬೆಳೆಸುವುದು ಅಗತ್ಯ ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಗುರುರಾಜ ಪ್ರಭು ಮಾತನಾಡಿ, ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿನಿಯರು ಮತ್ತು ಗ್ರಾಮಸ್ಥರ ಸಹಕಾರೊಂದಿಗೆ ಸಾಕಷ್ಟು ಸೇವಾಕಾರ್ಯಗಳು ನಡೆಯುತ್ತಿವೆ. ಗ್ರಾಮಗಳ ಉದ್ದಾರ, ಅಭಿವೃದ್ದಿಯೇ ಎನ್‌ಎಸ್‌ಎಸ್ ಘಟಕಗಳ ಧ್ಯೇಯವಾಗಿದೆ. ವಿದ್ಯಾರ್ಥಿಗಳಿಗೆ ಸಮುದಾಯಗಳೊಂದಿಗೆ ಬೆರೆಯುವುದು, ಕಲಿಯವುದು ಅನುಕೂಲ. 7 ದಿನ ಶ್ರಮದ ಸೇವೆ ನಡೆಯಲಿದೆ. ಎಲ್ಲರ ಸಹಕಾರ, ಗ್ರಾಮಪಂಚಾಯಿತಿ ಸದಸ್ಯರ ನೆರವು ಶಿಬಿರಕ್ಕೆ ನೆರವಾಗುತ್ತಿದೆ ಎಂದರು.

ಗಿಡ ನೆಡುವ ಕಾರ್ಯಕ್ರಮಕ್ಕೆ ಶಾಸಕ ರವಿಕುಮಾರ್ ಗಣಿಗ ಚಾಲನೆ ನೀಡಿದರು. ಎನ್‌ಎಸ್‌ಎಸ್ ಘಟಕಗಳ ಕಾರ್ಯಕ್ರಮಾಧಿಕಾರಿ ಡಾ.ಪುಷ್ಪಲತಾ, ಡಾ.ಶಿವರಾಜ್, ಪ್ರೊ.ಮಾದೇಗೌಡ, ಪ್ರೊ.ಪ್ರಸನ್ನ, ಡಾ.ಜಯಲಕ್ಷ್ಮೀ ಇತರರಿದ್ದರು.