ಕಿಕ್ಕೇರಿ: ಹೋಬಳಿ ಆನೆಗೊಳದಲ್ಲಿ ಆನೆಗೊಳಮ್ಮ ದೇವಿಯ ವಾರ್ಷಿಕ ಪೂಜಾ ಮಹೋತ್ಸವ ವಿಜೃಂಭಣೆಯಿಂದ ಇತ್ತೀಚೆಗೆ ನಡೆಯಿತು.
ಗಡಿಭಾಗದಲ್ಲಿ ನೆಲೆಸಿರುವ ದೇವಿ ಆನೆಗೊಳಮ್ಮ ದೇವಿಗೆ ಇಡೀ ಗ್ರಾಮಸ್ಥರು ಒಟ್ಟಿಗೆ ಸೇರಿ ಪೂಜಾ ಕೈಂಕರ್ಯ ನೆರವೇರಿಸಲು ಮುಂದಾದರು. ಮೊದಲು ಗ್ರಾಮದೇವತೆ ಬೋಳಮಾರನಹಳ್ಳಿಯಲ್ಲಿ ನೆಲೆಸಿದ್ದಳು. ಕಳೆದ ವರ್ಷ ದೇವಿಯ ಅಣತಿಯಂತೆ ಗ್ರಾಮದಲ್ಲಿಯೇ ದೇಗುಲ ನಿರ್ಮಿಸಿ ಗುಡಿಯ ದೇವಿಗೆ ಶಾಸೋಕ್ತವಾಗಿ ಜೀವಕಳೆ ತುಂಬಲಾಗಿತ್ತು. ಇದಕ್ಕೂ ಮುನ್ನ ದೇವಿಯ ಪೂಜಾರಾಧನೆ ಬೋಳಮಾರನಹಳ್ಳಿಯಲ್ಲಿ ನಡೆಯುತ್ತಿದ್ದ ಸಲುವಾಗಿ ದೇವಿಯ ಪೂಜಾ ಪರಿಕರಗಳನ್ನು ಈ ಗ್ರಾಮಕ್ಕೆ ಮುಖಂಡರು ತೆಗೆದುಕೊಂಡು ಹೋಗಬೇಕಿತ್ತು.
ಇಡೀ ಗ್ರಾಮಸ್ಥರು ಪೂಜೆ ಸಲ್ಲಿಸಿ ಮರುದಿನ ಗ್ರಾಮಕ್ಕೆ ಮರಳಬೇಕಿತ್ತು. ದೇವಿ ಒಪ್ಪಿಗೆ ಪಡೆದು ಗ್ರಾಮದಲ್ಲಿಯೇ ಮೊದಲ ಬಾರಿಗೆ ದೇವಿಯ ವಾರ್ಷಿಕ ಪೂಜೆ ಆನೆಗೊಳದಲ್ಲಿ ನಡೆಸಲಾಯಿತು. ಮೊದಲ ವರ್ಷದ ಹಬ್ಬಕ್ಕೆ ಸುತ್ತಮುತ್ತಲ ಗ್ರಾಮಸ್ಥರು, ನೆಂಟರಿಷ್ಟು ಅಕವಾಗಿ ಭಾಗವಹಿಸಿದ್ದರು.
ಎರಡು ದಿನಗಳ ನಡೆದ ಹಬ್ಬದಲ್ಲಿ ಮೊದಲು ದೇವಿಯ ಉತ್ಸವಮೂರ್ತಿಯನ್ನು ಪವಿತ್ರ ಗಂಗಾಜಲದಲ್ಲಿ ಪುಣ್ಯಸ್ನಾನ ಮಾಡಿಸಿ ಶುಚಿಗೊಳಿಸಲಾಯಿತು. ಪಂಚಾಮೃತ ಅಭಿಷೇಕ, ವಿವಿಧ ಹೋಮ ಹವನಾದಿಗಳು ನಡೆದವು. ಪರಿಮಳ ಪುಷ್ಪ, ವಸಾಭರಣಗಳ ಅಲಂಕಾರ ಮಾಡಲಾಯಿತು. ಪುಟ್ಟ ಬಾಲಕಿ ಮೇಲೆ ದೇವಿಯ ಅವಾಹನೆಯಾಯಿತು. ಹೊಂಬಾಳೆಯ ಕಳಶವನ್ನು ಬಾಲಕಿಯ ತಲೆ ಮೇಲೆ ಹೊರಿಸಲಾಯಿತು. ಬಾಲಕಿ ಸುಮಾರು ದೂರ ಗ್ರಾಮದಲ್ಲಿ ಹಿಂದೆ, ಮುಂದೆ ನಡೆದು ಅಚ್ಚರಿಗೊಳಿಸಿದರು. ಉತ್ಸವ ಮೂರ್ತಿ, ಅವಾಹನೆಯಾದ ಬಾಲಕಿ ಜತೆ ದೇವಿಯ ಹಲವರು ದೇವಿಯ ಹಾಡು ಹೇಳುತ್ತಾ ತಮಟೆ ವಾದ್ಯದೊಂದಿಗೆ ಸಾಗಿದರು.
ತರುವಾಯ ಈ ಬಾಲಕಿ ಜತೆ ಹೊಂಬಾಳೆ ಕಡೆ ಹೊತ್ತ ಬಾಲಕಿಯರು ರಂಗಸ್ಥಳದಲ್ಲಿ ಸಾಗಿದರು. ಅಂತಿಮವಾಗಿ ದೇವಿಯ ಮೆರವಣಿಗೆ ಸಮಾಪ್ತಿಯಾಯಿತು. ಗ್ರಾಮ ದೇವಿಗೆ ಮಹಾಮಂಗಳಾರತಿ ನಡೆದು ತೀರ್ಥ ಪ್ರಸಾದ ವಿನಿಯೋಗ, ಅನ್ನದಾಸೋಹ ನಡೆಯಿತು.