ವಿರಾಜಪೇಟೆ: ವಿರಾಜಪೇಟೆಯ ನಗರಕ್ಕೆ ಕಳಶಪ್ರಾಯದಂತಿರುವ ಮಲೆತಿರಿಕೆ ಬೆಟ್ಟದಲ್ಲಿ ಸ್ಥಿತವಾಗಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಪೂಜಾ ಮಹೋತ್ಸವಗಳು ಶ್ರೀ ಅಯ್ಯಪ್ಪ ಸೇವಾ ಸಮಿತಿ ಮಲೆತಿರಿಕೆ ಬೆಟ್ಟ ವಿರಾಜಪೇಟೆ ವತಿಯಿಂದ ವಿಜ್ರಂಭಣೆಯಿಂದ ಡಿ.30, 31, ಮತ್ತು ಜ.1ರಂದು ವಿಶೇಷ ವಾರ್ಷಿಕ ಪೂಜಾ ಮಹೋತ್ಸವಗಳು ನಡೆಯಲಿದೆ.
ಡಿ.30 ರಂದು ಬೆಳಗ್ಗೆ ಮತ್ತು ರಾತ್ರಿ ವಿಶೇಷ ಪೂಜೆ, 31 ರಂದು ಬೆಳಗ್ಗೆ ಮತ್ತು ರಾತ್ರಿ ವಿಶೇಷ ಪೂಜೆಗಳು ನಡೆಯಲಿವೆ. ಜ.1 ರಂದು ಮುಂಜಾನೆ 5.30 ಕ್ಕೆ ಗಣಪತಿ ಹೋಮ, ಲಕ್ಷ್ಮೀ ಪೂಜೆ, ಸರಸ್ವತಿ ಪೂಜೆ ನಡೆಯಲಿದೆ. ನಂತರ ಬೆಳಗ್ಗೆ 9ಕ್ಕೆ ತುಲಾಭಾರ ಸೇವೆ ಆರಂಭವಾಗಲಿದೆ. 10 ಗಂಟೆಗೆ ಲಕ್ಷಾರ್ಚನೆ ಸೇವೆ ನಡೆದು ಶ್ರೀ ಅಯ್ಯಪ್ಪ ಸ್ವಾಮಿಗೆ 12.30ಕ್ಕೆ ಮಹಾಪೂಜೆ ಸಲ್ಲಿಕೆಯಾಗಲಿದೆ.
ಪ್ರಸಾದ ವಿನಿಯೋಗ ಹಾಗೂ ಭಕ್ತರಿಗೆ ಅನ್ನಸಂತರ್ಪಣೆ ಜರುಗಲಿದೆ. ಸಂಜೆ 6.30ಕ್ಕೆ ಶ್ರೀ ಸ್ವಾಮಿಯ ಚಲನವಲನ, ಕಥಾ ಸಾರಾಂಶ ಒಳಗೊಂಡ ತೇರು ಶೋಭಾಯಾತ್ರೆಯೊಂದಿಗೆ ಮುಖ್ಯ ಬೀದಿಗಳಲ್ಲಿ ಸಂಚರಿಸಲಿದೆ. ಮೆರವಣಿಗೆಯ ಅಂಗವಾಗಿ ದೀಪದಾರತಿ, ಶ್ರೀ ಮತ್ಸ್ಯ ಅವತಾರ ಸ್ತಬ್ಧಚಿತ್ರ, ಕೇರಳದ ಚಂಡೆ ಮದ್ದಳೆ, ಮಂಗಳೂರಿನ ಚಿಲಿಪಿಲಿ, ಗೊಂಬೆ ಹಾಗೂ ಸಾಂಸ್ಕೃತಿಕ ಕಲಾ ತಂಡಗಳು ಶೋಭಾಯಾತ್ರೆಗೆ ಮೆರುಗು ನೀಡಲಿವೆ.
ಮೆರವಣಿಗೆಯು ಮಲೆತಿರಿಕೆ ಬೆಟ್ಟದ ತಪ್ಪಲಿನಿಂದ ಸಾಗಿ ತೆಲುಗರ ಬೀದಿ, ಜೈನರ ಬೀದಿ, ಫೀ.ಮಾ, ಕಾರ್ಯಪ್ಪ ರಸ್ತೆ, ಮುಖ್ಯರಸ್ತೆಯಲ್ಲಿ ಸಂಚರಿಸಿ ಮಲಬಾರ್ ರಸ್ತೆಯಲ್ಲಿರುವ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಕೊನೆಯಾಗಲಿದೆ. ಬಳಿಕ ಹಿಂದಿರುಗಿ ಮಧ್ಯರಾತ್ರಿ 12.30ಕ್ಕೆ ದೇವಾಲಯದಲ್ಲಿ ಶ್ರೀ ಸುಬ್ರಮಣ್ಯಸ್ವಾಮಿಗೆ ವಿಶೇಷ ಪೂಜೆ ನಡೆಯಲಿದೆ.
ಜ.14 ರಂದು ಸಂಜೆ 6.30ಕ್ಕೆ ದೇವಾಲಯದಲ್ಲಿ ಮಕರಜ್ಯೋತಿ ವಿಶೇಷ ಪೂಜೆ ನಡೆಯಲಿದೆ. ಶ್ರೀ ಅಯ್ಯಪ್ಪ ಸ್ವಾಮಿ ವಾರ್ಷಿಕ ಪೂಜಾ ಮಹೋತ್ಸವ ಮತ್ತು ಮಕರ ಜ್ಯೋತಿ ವಿಶೇಷ ಪೂಜೆ, ಎಲ್ಲ ಧಾರ್ಮಿಕ ಪೂಜೆಗಳಿಗೆ ನಾಡಿನ ಸರ್ವ ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸುವಂತೆ ಶ್ರೀ ಅಯ್ಯಪ್ಪ ಸೇವಾ ಸಮಿತಿ ಮನವಿ ಮಾಡಿದೆ.