ಜಿಲ್ಲೆ

ದೇವರ ಪ್ರೀತಿಗಿಲ್ಲ ಎಂದಿಗೂ ಅಂತ್ಯ...

ವಂ.ಸ್ಟೀಫನ್​ ಪಿರೇರಾ ಸಂದೇಶ

ತೊಟ್ಟಂ ಚರ್ಚ್​ನಲ್ಲಿ ಪಾಲಕರ ಸ್ಮರಣಾ ಮಹೋತ್ಸವ

ವಿಜಯವಾಣಿ ಸುದ್ದಿಜಾಲ ಉಡುಪಿ

ದೇವರು ಮಾನವರ ಮೇಲೆ ತೋರುವ ಪ್ರೀತಿ ಶಾಶ್ವತವಾಗಿದ್ದು, ಎಂದಿಗೂ ಅಂತ್ಯವಿರುವುದಿಲ್ಲ. ಹೀಗಾಗಿ ದೇವರಲ್ಲಿ ನಮ್ಮ ವಿಶ್ವಾಸ ಕಡಿಮೆಗೊಳಿಸದೆ ಬದುಕಿದಾಗ ಜೀವನ ಎಂದಿಗೂ ನಿಷ್ಕ್ರಿಯ ಆಗಲು ಬಿಡುವುದಿಲ್ಲ ಎಂದು ಮಂಗಳೂರು ಬಿಕರ್ನಕಟ್ಟೆ ಇನ್​ಫೆಂಟ್​ ಜೀಸಸ್​ ಚರ್ಚ್​ನ ವಂ.ಸ್ಟೀಫನ್​ ಪಿರೇರಾ ಹೇಳಿದರು.

ಮಲ್ಪೆಯ ತೊಟ್ಟಂ ಚರ್ಚ್​ನಲ್ಲಿ ಪಾಲಕರಾದ ಸಂತ ಅನ್ನಮ್ಮ ಮತ್ತು ಸಂತ ಜೋಕಿಮ್​ ಅವರ ವಾರ್ಷಿಕ ಸ್ಮರಣೆಯ ಪವಿತ್ರ ಬಲಿಪೂಜೆಯ ನಿಮಿತ್ತ ಜುಲೈ 26ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂದೇಶ ನೀಡಿದರು.

ಹಿರಿಯರಿಂದ ಮಾರ್ಗದರ್ಶನ

ಚರ್ಚ್​ನ ಪ್ರಧಾನ ಧರ್ಮಗುರು ವಂ. ಡೆನಿಸ್​ ಡೆಸಾ ಮಾತನಾಡಿ, ಸಂತ ಅನ್ನಮ್ಮ ಮತ್ತು ಸಂತ ಜೋಕಿಮ್​ ಹಿರಿಯರ ಪಾಲಕಿಯರಾಗಿದ್ದಾರೆ. ಇಂದಿನ ದಿನಗಳಲ್ಲಿ ನಮ್ಮ ಅಜ್ಜ-ಅಜ್ಜಿಯಂದಿರನ್ನು ವೃದ್ಧಾಶ್ರಮದಲ್ಲಿ ಇಡುವುದನ್ನು ಹೆಚ್ಚು ಕಾಣುತ್ತಿದ್ದೇವೆ. ಆದರೆ, ಹಿರಿಯ ಜೀವಗಳು ಮಕ್ಕಳಿಗೆ ಮೌಲ್ಯ ಕಲಿಸುವುದರೊಂದಿಗೆ ಉತ್ತಮ ಜೀವನ ನಡೆಸಲು ಮಾರ್ಗದರ್ಶಕರಾಗುತ್ತಾರೆ. ಅವರು ಕಲಿಸುವ ತಾಳ್ಮೆ ಹಾಗೂ ಸಹನೆಯ ಪಾಠಗಳು ಸದಾ ನಮಗೆ ದಾರಿದೀಪವಾಗುತ್ತದೆ ಎಂದರು.

ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್​ ಫರ್ಡಿನಾಂಡ್​ ಗೊನ್ಸಾಲ್ವಿಸ್​, ಉಡುಪಿ ವಲಯ ಪ್ರಧಾನ ಧರ್ಮಗುರು ವಂ.ಚಾರ್ಲ್ಸ್​ ಮಿನೇಜಸ್​, ಪೆರ್ನಾಲ್​ ಚರ್ಚ್​ನ ಧರ್ಮಗುರು ವಂ.ಜೆರೋಮ್​ ಮೊಂತೆರೋ, ವಂ. ವಿನ್ಸೆಂಟ್​ ಕ್ರಾಸ್ತಾ, ವಂ.ಸುನೀಲ್​ ಡಿಸಿಲ್ವಾ, ವಂ.ಪಿಲಿಪ್​ ನೆರಿ ಆರಾನ್ಹಾ, ವಂ.ವಿಕ್ಟರ್​ ಡಿಸೋಜಾ, ಚರ್ಚ್​ ಪಾಲನಾ ಮಂಡಳಿ ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫೆರ್ನಾಂಡಿಸ್​ ಇತರರು ಉಪಸ್ಥಿತರಿದ್ದರು.

ಸಂತ ಅನ್ನಮ್ಮ ಮತ್ತು ಸಂತ ಜೋಕಿಮ್​ ತಮ್ಮ ಜೀವನದಲ್ಲಿ ದೇವರಲ್ಲಿ ಸದಾ ವಿಶ್ವಾಸಿಗಳಾಗಿ ಬದುಕಿದರು. ಅವರ ಮಾರ್ಗದಲ್ಲಿ ನಡೆದಾಗ ನಮ್ಮೆಲ್ಲರ ಕುಟುಂಬಗಳೂ ಸಹ ಆಶೀರ್ವದಿಸಲ್ಪಡುತ್ತವೆ. ನಮ್ಮ ನೆರೆ&ಹೊರೆಯಲ್ಲಿರುವ ನಿರ್ಗತಿಕರಿಗೆ ಪ್ರೀತಿ, ವಿಶ್ವಾಸ ತೋರುವ ಮೂಲಕ ದೇವರಿಗೆ ಇನ್ನಷ್ಟು ಹತ್ತಿರವಾಗೋಣ. | ಸ್ಟೀಫನ್​ ಪಿರೇರಾ. ಬಿಕರ್ನಕಟ್ಟೆ ಇನ್​ಫೆಂಟ್​ ಜೀಸಸ್​ ಚರ್ಚ್​