ಜಿಲ್ಲೆ

ಸದುಪಯೋಗವಾಗಲಿ ಸಂಘದಿಂದ ಪಡೆದ ಸಾಲ...

ಪೊಲೀಸ್​ ವರಿಷ್ಠ ಹರಿರಾಂ ಶಂಕರ್​ ಆಶಯ

ಜಿಲ್ಲಾ ಪೊಲೀಸ್​ ನೌಕರರ ಸಹಕಾರ ಸಂಘದ ಸಭೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಉಡುಪಿ ಜಿಲ್ಲಾ ಪೊಲೀಸ್​ ನೌಕರರ ಸಹಕಾರ ಸಂಘವು ರಾಷ್ಟ್ರೀಕೃತ ಬ್ಯಾಂಕ್​ಗಳಿಗಿಂತ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದು, ಠೇವಣಿಗಳಿಗೂ ಸಹ ಹೆಚ್ಚು ಬಡ್ಡಿ ನೀಡುತ್ತಿದೆ. ಇತರ ಸಹಕಾರಿ ಸಂಘಗಳಿಗೆ ಹೋಲಿಸಿದರೆ ಶೇ.100 ಸಾಲ ಮರುಪಾವತಿ ಆಗುತ್ತಿರುವುದರಿಂದ ಸಂಘಕ್ಕೆ ನಷ್ಟದ ಮಾತೂ ಇಲ್ಲ. ಸಂಸ್ಥೆಯಿಂದ ಸಾಲಕ್ಕಾಗಿ ಸಾಲ ಮಾಡದೆ, ಪಡೆದ ಸಾಲದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಂ ಶಂಕರ್​ ತಿಳಿಸಿದರು.

ಉಡುಪಿ ಜಿಲ್ಲಾ ಪೊಲೀಸ್​ ಕಚೇರಿಯ ಸೆಂಟಿನಲ್​ ಹಾಲ್​ನಲ್ಲಿ ಸೆ.19ರಂದು ಆಯೋಜಿಸಿದ್ದ ಉಡುಪಿ ಜಿಲ್ಲಾ ಪೊಲೀಸ್​ ನೌಕರರ ಸಹಕಾರ ಸಂಘ (ನಿ.)ದ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

56,85 ಲಕ್ಷ ರೂ. ನಿವ್ವಳ ಲಾಭ

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಎಸ್ಪಿ ಸುಧಾಕರ ಎಸ್​. ನಾಯ್ಕ ಮಾತನಾಡಿ ಪೊಲೀಸರಿಂದ, ಪೊಲೀಸರಿಗಾಗಿ, ಪೊಲೀಸರಿಗೋಸ್ಕರ 12 ವರ್ಷದಿಂದ ಎಲ್ಲರ ಸಹಕಾರದಿಂದ ಸಂಘ ಉತ್ತಮವಾಗಿ ಮುನ್ನಡೆಯುತ್ತಿದೆ. ಸಂಘವು 2024-25ನೇ ಸಾಲಿನಲ್ಲಿ 56,85,087 ರೂ. ನಿವ್ವಳ ಲಾಭ ಗಳಿಸಿದೆ. ಹೀಗಾಗಿ ಸದಸ್ಯರಿಗೆ ಶೇ.14 ಡಿವಿಡೆಂಡ್​ ನೀಡಲಾಗುವುದೆಂದು ಫೋಷಿಸಿದರು.

ಪ್ರಧಾನ ಕಾರ್ಯದರ್ಶಿ ಡಿವೈಎಸ್ಪಿ (ಸಶಸ್ತ್ರ) ತಿಮ್ಮಪ್ಪ ಗೌಡ ಜಿ. ಹಾಗೂ ಸಂಘದ ಎಲ್ಲ ನಿರ್ದೇಶಕರು ಉಪಸ್ಥಿತರಿದ್ದರು.

ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿಯಲ್ಲಿ ಶೇ.85ಕ್ಕಿಂತ ಅಧಿಕ ಅಂಕ ಗಳಿಸಿದ 52 ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಂಘದ ಖಾಸಗಿ ಕಾರ್ಯದರ್ಶಿ ಜಯಶೀಲ್​ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು.

ಉದಯಕುಮಾರ್​ ಪ್ರಾರ್ಥಿಸಿದರು. ರಾಘವೇಂದ್ರ ದೇವಾಡಿಗ ಸ್ವಾಗತಿಸಿದರು. ಶಿವಾನಂದ ಬಿ. ವಂದಿಸಿದರು. ಯೋಗೇಶ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.