ಜಿಲ್ಲೆ

ಸಹಕಾರಿಗಳ ಮುಖ್ಯ ಕಾರ್ಯನಿರ್ವಾಹಕರ ವಾರ್ಷಿಕ ಸಭೆ

ಮಡಿಕೇರಿ: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಮೈಸೂರು ಪ್ರಾಂತೀಯ ಕಛೇರಿಯ ವತಿಯಿಂದ ಕೊಡಗು ಜಿಲ್ಲಾ ಸಹಕಾರಿಗಳ ಮುಖ್ಯ ಕಾರ್ಯ ನಿರ್ವಾಹಕರ ವಾರ್ಷಿಕ ಸಭೆ ಕೊಡವ ಎಂಟರ್‌ಪ್ರೆನ್ಯೂರ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಕೊಡವ ಸಮಾಜ ಕಾಂಪ್ಲೆಕ್ಸ್‌ನಲ್ಲಿ ಇತ್ತೀಚೆಗೆ ನಡೆಯಿತು.

ಸಭೆಯನ್ನು ಉದ್ಘಾಟಿಸಿದ ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ ಅಧ್ಯಕ್ಷ ಎಂ.ಪಿ.ಮುತ್ತಪ್ಪ ಅವರು, ಕೊಡಗಿನ ಸಹಕಾರಿ ಮತ್ತು ಅದರ ಕಾರ್ಯವೈಖರಿಯ ಕುರಿತು ವಿಮರ್ಶಿಸಿದರು. ಸಂಯುಕ್ತ ಸಹಕಾರಿಯ ಮೈಸೂರು ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ ಮಾತನಾಡಿದರು.

ಜಿಲ್ಲಾ ವ್ಯವಸ್ಥಾಪಕ ಮನೋಜ್ ಕುಮಾರ್ ಸಾಮಾನ್ಯ ಸೇವಾ ಕೇಂದ್ರದ ಕುರಿತು(ಸಿಎಸ್‌ಸಿ) ಮಾಹಿತಿಯನ್ನು ನೀಡಿದರು. ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ ಮುಖ್ಯ ಕಾರ್ಯನಿರ್ವಾಹಕರ ಶಾಸನಬದ್ಧ ಜವಾಬ್ದಾರಿ ಮತ್ತು ಕರ್ತವ್ಯಗಳ ಕುರಿತು ಉಪನ್ಯಾಸ ನೀಡಿದರು. ಸಹಕಾರಿ ಅಭಿವೃದ್ಧಿ ಅಧಿಕಾರಿ ಆರ್.ಎಸ್.ಸುರೇಶ ಆರ್ಥಿಕ ಸಬಲತೆಯ ಮಾನದಂಡಗಳ ಸುತ್ತೋಲೆ ಮತ್ತು ಲೆಕ್ಕಪರಿಶೋಧನ ವರದಿಯಲ್ಲಿ ಕಂಡುಬಂದಿರುವ ನ್ಯೂನ್ಯತೆಗಳ ಕುರಿತು ಉಪನ್ಯಾಸ ನೀಡಿದರು.

ಕೊಡವ ಎಂಟರ್‌ಪ್ರೆನ್ಯೂರ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟಿಡ್‌ನ ನಿರ್ದೇಶಕ ಎಂ.ಎಂ.ಕುಟ್ಟಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಟ್ಟು ೧೫ ಸೌಹಾರ್ದ ಸಹಕಾರಿಗಳ ಮುಖ್ಯಕಾರ್ಯನಿರ್ವಾಹಕರು ಮತ್ತು ಸಿಬ್ಬಂದಿಗಳು ಹಾಜರಿದ್ದರು. ಕೊಡವ ಎಂಟರ್‌ಪ್ರೆನ್ಯೂರ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಮುಖ್ಯಕಾರ್ಯನಿರ್ವಾಹಕ ಪೊನ್ನಪ್ಪ ವಂದಿಸಿದರು.