ಮಂಡ್ಯ: ನೀರಿನ ಮಿತಬಳಕೆ, ಸದ್ಬಳಕೆ, ವೈಜ್ಞಾನಿಕ ಬೆಳೆ ಪದ್ಧತಿ ಮತ್ತು ಸಮರ್ಪಕ ನಿರ್ವಹಣೆ ಬಗ್ಗೆ ವಿಶೇಷ ಆದ್ಯತೆಯನ್ನು ಅಚ್ಚುಕಟ್ಟುದಾರರು ಹೊಂದಬೇಕಾಗಿದೆ ಎಂದು ಕೆಆರ್‌ಎಸ್ ಯೋಜನಾ ಮಟ್ಟದ ನೀರು ಬಳಕೆದಾರರ ಸಂಘಗಳ ಸಹಕಾರ ಮಹಾಮಂಡಳದ ನಿರ್ದೇಶಕ ಮಂಗಲ ಎಂ.ಯೋಗೀಶ್ ಕಿವಿಮಾತು ಹೇಳಿದರು.
ತಾಲೂಕಿನ ಮಂಗಲ ಗ್ರಾಮದ ನೀರು ಬಳಕೆದಾರರ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ನೀರಿನ ಕರವಸೂಲಿಯನ್ನು ಕಡ್ಡಾಯವಾಗಿ ನೀರು ಬಳಕೆದಾರರ ಸಹಕಾರ ಸಂಘಕ್ಕೆ ಪಾವತಿ ಮಾಡಬೇಕಾಗಿದೆ. ಕರ ವಸೂಲಿಯಿಂದ ಸಂಘಗಳು ಸ್ವಾವಲಂಬನೆಯಾಗುತ್ತವೆ. ಆದಾಯೋತ್ಪನ್ನ ಚಟುವಟಿಕೆಗಳಿಗೆ ಪೂರಕವಾದ ಕಾರ್ಯ ಮಾಡಲು ಸಾಧ್ಯವಾಗುತ್ತದೆ. ಪ್ರತಿ ರೈತರು ಕರವಸೂಲಿಯನ್ನು ಆಯಾ ವರ್ಷದ ಬೆಳೆಗೆ ಅನುಗುಣವಾಗಿ ನೀಡಬೇಕಿದೆ. ನೀರು ಬಳಕೆದಾರರ ಸಹಕಾರ ಸಂಘಗಳು ಸಹಕಾರ ಕ್ಷೇತ್ರದಲ್ಲಿರುವುದರಿಂದ ನಾಯಕತ್ವ ಬೆಳವಣಿಗೆ ಜತೆಗೆ ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬಹುದಾಗಿದೆ. ಪ್ರತಿ ಸಂಘದ ಸದಸ್ಯತ್ವ ಪಡೆದು ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸಬೇಕು ಎಂದರು.
ಸಹಕಾರ ಕ್ಷೇತ್ರದಲ್ಲಿ ನೀರಾವರಿ ಆಡಳಿತವು ಇಡೀ ರಾಷ್ಟದಲ್ಲಿಯೇ ಕರ್ನಾಟಕದಲ್ಲಿ ಜಾರಿಯಲ್ಲಿರುವುದು ಸಚಿವ ಎಚ್.ಕೆ.ಪಾಟೀಲ್ ಅವರ ಪಾತ್ರ ಗಣನೀಯವಾಗಿದೆ. ನೀರಾವರಿ ಮಂತ್ರಿಯಾಗಿದ್ದ ಸಂದರ್ಭ ಕಾಯ್ದೆಗೆ ತಿದ್ದುಪಡಿ ತಂದು ಸಹಭಾಗಿತ್ವದಲ್ಲಿ ಆಡಳಿತವನ್ನು ಪ್ರತಿ ಅಚ್ಚುಕಟ್ಟುದಾರ ಹೊಂದಬೇಕು ಹಾಗೂ ವೈಜ್ಞಾನಿಕ ಮನೋಭಾವದೊಡನೆ ಕೃಷಿಯಲ್ಲಿ ಸ್ವಾವಲಂಬಿ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆಂದು ಸಂಘಗಳ ಬಲವರ್ಧನೆಗೆ ಶ್ರಮಿಸಿದ್ದಾರೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಎಂ.ಇ.ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನಾಗರಾಜು, ನಿರ್ದೇಶಕರಾದ ಎಂ.ಜೆ.ಗಿರೀಶ್, ಕೆಂಚೇಗೌಡ, ಎಂ.ಸಿ.ರವಿಕುಮಾರ್, ಚಂದ್ರಹಾಸ, ಸಿಇಒ ಎಂ.ಬಿ.ಸುರೇಶ್ ಉಪಸ್ಥಿತರಿದ್ದರು.