ಜಿಲ್ಲೆ

ಆರ್ಥಿಕ ಪ್ರಗತಿಯಲ್ಲಿ ಸಹಕಾರಿ ಕ್ಷೇತ್ರ: ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ನಿಯಮಿತ ಅಧ್ಯಕ್ಷ ಬೇಲೂರು ಸೋಮಶೇಖರ್ ಹೇಳಿಕೆ

ಮಂಡ್ಯ: ಮಂಡ್ಯ ನೆಲದಲ್ಲಿ ಸಹಕಾರಿ ಕ್ಷೇತ್ರ ಹುಟ್ಟಿ ಶ್ರೀಮಂತವಾಗಿ ಬೆಳೆದು ರಾಜ್ಯಕ್ಕೆ ವಿಸ್ತಾರಗೊಂಡಿತು ಎಂದು ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ನಿಯಮಿತ ಅಧ್ಯಕ್ಷ ಬೇಲೂರು ಸೋಮಶೇಖರ್ ಹೇಳಿದರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದಿಂದ ಆಯೋಜಿಸಿದ್ದ ಸೌಹಾರ್ಧ ಸಹಕಾರಿ ಸಂಘಗಳ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆ ಮತ್ತು ಸೌಹಾರ್ಧ ಸಹಕಾರಿಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರ ದೂರದೃಷ್ಟಿತ್ವದ ಪ್ರತಿಫಲವಾಗಿ ಸಾಕಷ್ಟು ಸಹಕಾರಿ ಸಂಘ ಹುಟ್ಟಿ, ಬೆಳೆದು ಕೋಟ್ಯಂತರ ರೂ.ಗಳ ವ್ಯವಹಾರ ಮಾಡುತ್ತಿವೆ. ರೈತಾಪಿ ಜನರಿಗೆ ಆರ್ಥಿಕ ನೆರವು ಲಭ್ಯವಾಗುತ್ತಿದೆ ಎಂದು ನುಡಿದರು.

ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್ ಮತ್ತು ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ನಿಯಮಿತಗಳಲ್ಲಿ ಸೌಹಾರ್ದ ಸಹಕಾರಿ ಸಂಘಗಳ ನೋಂದಣಿಗೆ ನಾವು ಕೂಡ ಒತ್ತಾಯಿಸುತ್ತೇವೆ. ಇತ್ತೀಚಿನ ದಿನಗಳಲ್ಲಿ ಮೈಸೂರು-ಚಾಮರಾಜನಗರದಲ್ಲಿ ಪ್ರವರ್ಧಮಾನದಲ್ಲಿರುವ ಸೌಹಾರ್ಧ ಸಹಕಾರ ಕ್ಷೇತ್ರವು ಮಂಡ್ಯದಲ್ಲೂ ನೆಲೆಗೊಳ್ಳುತ್ತಿದೆ. ಸಾಕಷ್ಟು ಸೌಹಾರ್ಧ ಸಂಘ ರೂಪುಗೊಂಡಿವೆ. ಜಿಲ್ಲೆಯಲ್ಲಿ 34 ಸೌಹಾರ್ಧ ಸಹಕಾರಿ ಸಂಘ ಮಾದರಿಯಾಗಿ ಬೆಳೆಯುತ್ತಿವೆ. ಜು.15ರಂದು ಸಹಕಾರಿ ಭೀಷ್ಮ, ನಿತ್ಯಸಚಿವ ಕೆ.ವಿ.ಶಂಕರಗೌಡ ಜನ್ಮದಿನ. ಅಂದು ಎಲ್ಲ ಸಹಕಾರಿ ಸಂಘ ಸಂಸ್ಥೆಗಳಲ್ಲಿ ಜನ್ಮದಿನವನ್ನು ಆಚರಿಸಿ ಅವರನ್ನು ಸ್ಮರಿಸೋಣ ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸೌಹಾರ್ಧ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಬಿ.ಟಿ.ಗುರುರಾಜ್ ಮಾತನಾಡಿ, ಸೌಹಾರ್ಧ ಸಹಕಾರಿಗಳು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಆರೋಗ್ಯ ಹೆಚ್ಚಿಸಿಕೊಳ್ಳುವುದು ಉತ್ತಮ. ಈ ನಿಟ್ಟಿನಲ್ಲಿ ವಿವಿಧ ವಿಭಿನ್ನ ಆಲೋಚನೆಯಿಂದ ವ್ಯವಸ್ಥೆ ಮಾಡಲಾಯಿತು ಎಂದು ತಿಳಿಸಿದರು.

ರಾಜ್ಯ ಸೌಹಾರ್ಧ ಸಂಯುಕ್ತ ಸಹಕಾರಿ ನಿಯಮಿತ ನಿರ್ದೇಶಕ ಕೆ.ಎಸ್.ಮಂಜುನಾಥ್, ನಿರ್ದೇಶಕ ಭಾರತಿ ಭಟ್, ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಎಸ್.ಸಿದ್ದಲಿಂಗಯ್ಯ, ಮೈಸೂರು ಪ್ರಾಂತ ಪ್ರಾಂತೀಯ ವ್ಯವಸ್ಥಾಪಕ ಗುರುಪ್ರಸಾದ್ ಬಂಗೇರ, ಮಂಡ್ಯ ಮತ್ತು ಚಾಮರಾಜನಗರ ಸೌಹಾರ್ಧ ಅಭಿವೃದ್ಧಿ ಅಧಿಕಾರಿ ಬಲರಾಂ, ಸಿಇಒ ಎಚ್.ಸಿ.ಪ್ರವೀಣ್, ನಿರ್ದೇಶಕರಾದ ಎ.ಸಿ.ರಮೇಶ್, ವೆಂಕಟೇಶಪ್ಪ, ಶಿವಲಿಂಗೇಗೌಡ, ಆರ್.ಪಲ್ಲವಿ, ವಿ.ದೊರೆಸ್ವಾಮಿ, ವೈ.ಡಿ.ಶಿವಣ್ಣ, ಎಚ್.ಆರ್.ರಾಘವೇಂದ್ರ, ಕೆ.ಆರ್.ಮಂಜುನಾಥ್, ಕೃಷ್ಣೇಗೌಡ, ಮಲ್ಲಿಕಾರ್ಜುನಸ್ವಾಮಿ, ರಮೇಶ್, ವೆಂಕಟೇಶ್‌ಗೌಡ, ಡಿ.ನಾಗರಾಜು , ಪುಟ್ಟಬುದ್ದಿ, ಬಿ.ವಿ.ಕೃಷ್ಣಪ್ಪ ಇತರರಿದ್ದರು. ಇದೇ ವೇಳೆ ವಿವಿಧ ಕ್ರೀಡೆಗಳಲ್ಲಿ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು.