ಜಿಲ್ಲೆ

ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕ್ರಿಯಾತ್ಮಕವಾಗಿ ಕೆಲಸ ನಿರ್ವಹಿಸಲಿ: ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ

ಮಂಡ್ಯ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತಮ್ಮ ಕ್ರಿಯಾತ್ಮಕ ಚಟುವಟಿಕೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ತಲುಪುವಂತೆ ಕಾರ್ಯ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ವಾರ್ಷಿಕ ಪರಿಷತ್ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದುವರೆಗೂ 5000 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ನೋಂದಣಿಯಾಗಿದ್ದಾರೆ. ಈ ಸಾಲಿನಲ್ಲಿ 8000 ತಲುಪುವ ಗುರಿ ನಿಗದಿ ಮಾಡಿಕೊಳ್ಳಿ ಎಂದರು.

ವಿದ್ಯಾರ್ಥಿಗಳಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಮಹತ್ವದ ಕುರಿತು ಶಿಕ್ಷಕರು ತಿಳಿಸಬೇಕು. ಬದುಕಿನಲ್ಲಿ ಶಿಸ್ತು ರೂಪಿಸಿಕೊಳ್ಳಲು, ಸಮಾಜಸೇವೆ, ದೇಶ ಪ್ರೇಮದಂತಹ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಅತ್ಯಂತ ಸಹಕಾರಿಯಾಗಿದೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ವಿವಿಧ ಕಾರ್ಯಕ್ರಮ ರೂಪಿಸಬೇಕು. ಜಾಗೃತಿ ಮೂಡಿಸಲು ಅನುದಾನದ ಅವಶ್ಯಕತೆ ಇದೆ. ತಾಲೂಕು, ಗ್ರಾಮ ಪಂಚಾಯಿತಿಯಿಂದ ಅನುದಾನ ಕ್ರೋಢಿಕರಿಸಿ. ಇದರೊಂದಿಗೆ ದಾನಿಗಳನ್ನು ಸಂಪರ್ಕಿಸಿ. ಆರ್ಥಿಕವಾಗಿ ಸದೃಢವಾದರೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು ಎಂದರು.

ಜಿಲ್ಲಾಮಟ್ಟ ಹೊರತುಪಡಿಸಿ ತಾಲೂಕು ಮಟ್ಟದಲ್ಲೂ ಸಹ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಸಕ್ತ ಮಕ್ಕಳಿಗೆ ತರಬೇತಿ ನೀಡಿ. ಶಾಲಾ ಹಂತದಲ್ಲೇ ವಿದ್ಯಾರ್ಥಿಗಳು ಸಮಾಜ ಸೇವಾ ಕೆಲಸದಲ್ಲಿ ತೊಡಗಿಕೊಂಡರೆ ಉತ್ತಮ ಪ್ರಜೆಗಳಾಗಿ ರೂಪುಗೊಂಡು ಸಮಾಜಕ್ಕೆ ಕೊಡುಗೆ ನೀಡುತ್ತಾರೆ. ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರನ್ನು ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಮಹಾಪೋಷಕರಾಗಿ ನೇಮಕ ಮಾಡಿಕೊಂಡಿದ್ದು, ಇದು ಹೆಚ್ಚಿನ ಬಲ ತುಂಬಲಿದೆ ಎಂದರು.

ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯು ಉಪ ನಿರ್ದೇಶಕ ಸಿ.ಚೆಲುವಯ್ಯ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಜಿ.ಪಿ. ಭಕ್ತವತ್ಸಲ ಇತರರಿದ್ದರು.