ಜಿಲ್ಲೆ

ಶೀಘ್ರದಲ್ಲೇ ಗೋಶಾಲೆ ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

ಮಂಡ್ಯ: ಜಿಲ್ಲೆಯ ಮೊದಲ ಸರ್ಕಾರಿ ಗೋಶಾಲೆಯನ್ನು ನಿರ್ಮಾಣವಾಗಿದ್ದು, ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಾಣಿ ದಯಾ ಸಂಘ ಸಮಿತಿಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗೋಶಾಲೆ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಪ್ರಾಣಿಗಳಿಗೆ ವಸತಿ, ಕುಡಿಯುವ ನೀರು, ಮೇವಿಗೆ ಯಾವುದೇ ತೊಂದರೆಯಾಗಬಾರದು. ಹೂತಗೆರೆ ಗ್ರಾಮದ ಗೋಶಾಲೆಯು 10 ಎಕರೆ ವಿಸ್ತೀರ್ಣದಲ್ಲಿದ್ದು, ಇದರ ಸುತ್ತ ಕಾಂಪೌಂಡ್ ಅಥವಾ ಬೇಲಿ ನಿರ್ಮಿಸಿ ಸ್ಥಳದ ರಕ್ಷಣೆ ಮಾಡಿಕೊಳ್ಳಬೇಕು ಇಲ್ಲವಾದಲ್ಲಿ ಒತ್ತುವರಿಯಾಗುವ ಸಾಧ್ಯತೆ ಹೆಚ್ಚು. ಗೋಶಾಲೆಯ ಸುತ್ತ ಕಾಂಪೌಂಡ್ ನಿರ್ಮಿಸಲು ಯೋಜನೆ ಸಿದ್ಧಪಡಿಸಿ. ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಕಡಿಮೆಗೊಳಿಸಲು ಎ.ಬಿ.ಸಿ ಚಿಕಿತ್ಸೆಗಾಗಿ ಸ್ಥಳೀಯ ಸಂಸ್ಥೆಗಳು ಅನುದಾನ ಮೀಸಲಿಡಿ. ಪ್ರತ್ಯೇಕವಾಗಿ ಸ್ಥಳ ಗುರುತಿಸಿ ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿ ಎಂದು ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಬೇರೆ ದೇಶಗಳಿಗಿಂತ ಭಾರತದಲ್ಲಿ ರೇಬೀಸ್ ರೋಗಿಗಳ ಸಂಖ್ಯೆ ಹೆಚ್ಚು. ಇದಕ್ಕೆ ಮುಖ್ಯ ಕಾರಣ ಬೀದಿ ನಾಯಿ ಕಡಿತ. ಅದರಲ್ಲಿಯೂ ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಮಂಡ್ಯದಲ್ಲಿ ಬೀದಿ ನಾಯಿ ಕಡಿತಕ್ಕೆ ಒಳಗಾಗಿರುವವರ ಸಂಖ್ಯೆ ಹೆಚ್ಚಿದೆ. ಈ ಹಿನ್ನಲೆಯಲ್ಲಿ ಎ.ಬಿ.ಸಿ ಚಿಕಿತ್ಸೆ ಕೆಲಸ ಚುರುಕುಗೊಳಿಸಿ ಎಂದರು.

ಸಹಾಯಧನ ಮಂಜೂರಾತಿ ಚರ್ಚೆ: ಇನ್ನು ಜಿಲ್ಲೆಯಲ್ಲಿ ಖಾಸಗಿಯಾಗಿ ಕಾರ್ಯನಿರ್ವಹಿಸುವ ಗೋಶಾಲೆಗಳಿಗೆ ಪ್ರತಿ ಗೋವಿಗೆ ಪ್ರತಿದಿನಕ್ಕೆ 17.30 ರೂನಂತೆ ಸಹಾಯಧನ ನೀಡುವ ಬಗ್ಗೆ ಚರ್ಚೆ ನಡೆಸಲಾಯಿತು.

ಸಹಾಯಧನ ಕೋರಿ ಮನವಿ ಸಲ್ಲಿಸಿರುವ ಮಂಡ್ಯ ತಾಲೂಕು ಸಾತನೂರಿನಲ್ಲಿರುವ ಆದಿಚುಂಚನಗಿರಿ ಗೋಶಾಲೆ, ನಾಗಮಂಗಲ ತಾಲೂಕು ಆದಿಚುಂಚನಗಿರಿ ಗೋಶಾಲೆ, ಪಾಂಡವಪುರ ತಾಲೂಕು ದೊಡ್ಡಬ್ಯಾಡರಹಳ್ಳಿಯಲ್ಲಿರುವ ಧ್ಯಾನ ಫೌಂಡೇಷನ್ ಗೋರಕ್ಷಾ ಟ್ರಸ್ಟ್‌ನ ಚೈತ್ರ ಗೋಶಾಲೆ, ಕೆರೆತೊಣ್ಣೂರು ಯತಿರಾಜ್ ಸೇವಾ ಟ್ರಸ್ಟ್, ಮದ್ದೂರು ತಾಲೂಕು ಹರಕನಹಳ್ಳಿಯಲ್ಲಿರುವ ಕೃಷ್ಣ ಗೀರ್ ಗೋಶಾಲೆ ಟ್ರಸ್ಟ್, ಹೊಸಗಾವಿ ಗ್ರಾಮದ ಗಣೇಶ್ ದೇಸಿ ಗೋಶಾಲೆ ಟ್ರಸ್ಟ್, ಕದಲೂರಿನಲ್ಲಿರುವ ನಿಧಿಗೌಡ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೇವಾ ಟ್ರಸ್ಟ್ ಹಾಗೂ ಮಂಡ್ಯ ತಾಲೂಕು ಕಾಮಧೇನು ಗೋ ಸಂರಕ್ಷಣಾ ಟ್ರಸ್ಟ್‌ಗೆ ಸಹಾಯಧನ ಮಂಜೂರಾತಿ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಸುರೇಶ್, ಮಂಡ್ಯ ನಗರಸಭೆ ಆಯುಕ್ತ ಮಂಜುನಾಥ್ ಹಾಗೂ ವಿವಿಧ ಗೋಶಾಲೆ ಮುಖ್ಯಸ್ಥರು ಉಪಸ್ಥಿತರಿದ್ದರು.