ಹೊಳೆನರಸೀಪುರ : ಶ್ರೀ ಶಿವಕುಮಾರ ಸ್ವಾಮೀಜಿ ಸಹಕಾರ ಸಂಘದ 2023-2024 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯನ್ನು ಪಟ್ಟಣದ ಬಸವ ಭವನದಲ್ಲಿ ಆ.24 ರಂದು ಬೆಳಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಚ್.ಆರ್. ಸುರೇಶ್ ತಿಳಿಸಿದರು.
ವಧುವರಾನ್ವೇಷಣೆ, ರೈತರ ವಾಟ್ಸ್‌ಆ್ಯಪ್ ಗ್ರೂಪ್ ರಚನೆ, ವೀರಶೈವ ನಿಗಮ ಮಂಡಳಿ ಕೌಂಟರ್ ಮತ್ತು ನೇತ್ರದಾನದ ಬಗ್ಗೆ ಅರಿವು ಮೂಡಿಸುವ ಸಮಾಜಮಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಾರ್ಷಿಕ ಮಹಾ ಸಭೆಗೆ ಆಗಮಿಸುವ ಷೇರುದಾರರು ಕಡ್ಡಾಯವಾಗಿ ಆಹ್ವಾನ ಪತ್ರಿಕೆ ತರಬೇಕು ಮತ್ತು ಷೇರು ಖಾತೆ ಸಂಖ್ಯೆಯನ್ನು ದಾಖಲಾತಿ ಪುಸ್ತಕದಲ್ಲಿ ನಮೂದಿಸಿ ಸಹಿ ಮಾಡಬೇಕು. ಮಹಾ ಸಭೆಯಲ್ಲಿ ಚರ್ಚಿಸತಕ್ಕ ವಿಷಯಗಳಿದ್ದಲ್ಲಿ ಅಥವಾ ಕೇಳಲು ಇಚ್ಚಿಸುವ ವಿಷಯಗಳಿದ್ದಲ್ಲಿ, ಸದಸ್ಯರು ಏಳು ದಿನ ಮುಂಚಿತವಾಗಿ ತಿಳಿಸತಕ್ಕದ್ದು ಎಂದರು.
ಬೈಲಾ ಪ್ರಕಾರ ಸಹಕಾರ ಸಂಘದ ಚುನಾವಣೆಯಲ್ಲಿ ಪ್ರತಿನಿಧಿಸಲು ಸಂಘದ ಸದಸ್ಯರು, ಚುನಾವಣೆಯ ನಂತರ 5 ವರ್ಷದ ಅವಧಿಯಲ್ಲಿ ಕನಿಷ್ಠ ಎರಡು ಮಹಾಸಭೆಗೆ ಕಡ್ಡಾಯವಾಗಿ ಹಾಜರಾಗಿರಬೇಕು ಹಾಗೂ ಕನಿಷ್ಠ 10.000 ರೂ.ಗಳ ವ್ಯವಹಾರ ನಡೆಸಿರಬೇಕು ಮತ್ತು ಈ ನಿಮಯವು ಮುಂದಿನ ಚುನಾವಣೆಗೆ ಕಡ್ಡಾಯವಾಗಿ ಅನ್ವಯಿಸುತ್ತದೆ ಎಂದು ತಿಳಿಸಿದರು.
ಸಂಘದ ನಿರ್ದೇಶಕರಾದ ಎಚ್.ಎಸ್.ಪ್ರಭುಶಂಕರ್, ಐ.ಈ.ಸ್ವಾಮಿ, ಎಂ.ಇ.ದೇವರಾಜು ಇತರರು ಇದ್ದರು.