ಸಾಸ್ವೆಹಳ್ಳಿ: ವಿವಿದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಸಭಾಂಗಣದಲ್ಲಿ ಶನಿವಾರ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷ ಆರ್. ತಿಪ್ಪೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ. ಬಸವರಾಜ್ ಮಾತನಾಡಿ, ರೈತರಿಗೆ ಕೆಸಿಸಿ ಸಾಲ ಮತ್ತು ತೋಟಗಾರಿಕೆ ಅಭಿವೃದ್ಧಿಗೆ ಒಟ್ಟು 795.22 ಲಕ್ಷ ರೂ. ಸಾಲ ವಿತರಿಸಿದೆ. ಈ ವರ್ಷ ಸಂಘ 6.52 ಲಕ್ಷ ರೂ. ಲಾಭಗಳಿಸಿದೆ ಎಂದು ತಿಳಿಸಿದರು.
1913ರಲ್ಲಿ ಸಹಕಾರ ಸಂಘ ಪ್ರಾರಂಭವಾಗಿದ್ದು, ಇದರ ವ್ಯಾಪ್ತಿಯಲ್ಲಿ 8 ಗ್ರಾಮಗಳಿವೆ. 3328 ಷೇರುದಾರರಿದ್ದಾರೆ ಎಂದು ವಿವರಿಸಿದರು.
ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ಹೆಚ್ಚುವರಿ ಸಾಲ ಮತ್ತು ಹೊಸ ಸಾಲಗಳ ಬಗ್ಗೆ ಚರ್ಚೆ ಮಾಡಿದರು.
ಉಪಾಧ್ಯಕ್ಷ ಎಸ್.ಎಚ್. ಬಸವರಾಜಪ್ಪ, ಸದಸ್ಯರಾದ ಎನ್.ಆರ್. ಸಿದ್ದಪ್ಪ, ಎಚ್.ಪಿ. ಜನಾರ್ಧನ, ಸುಲೇಮಾನ್ ಖಾನ್, ಕೆ.ಎಸ್. ಹನುಮಂತಪ್ಪ, ಬಿ. ನಾಗರಾಜಪ್ಪ, ಡಿ. ಷಣ್ಮುಖಪ್ಪ, ಡಿ. ಮಂಜಪ್ಪ ಉಪಸ್ಥಿತರಿದ್ದರು.