ಜಿಲ್ಲೆ

ಆರ್ಥಿಕ ಸಬಲತೆಗೆ ಸಂಪನ್ಮೂಲ ಕ್ರೂಢೀಕರಿಸಿ

Davangere - Desk - Ganesh M K

ಹೊನ್ನಾಳಿ: ಹಿರಿಯ ನಾಗರಿಕರ ಆರ್ಥಿಕ ಸಬಲೀಕರಣಕ್ಕೆ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ ಅಗತ್ಯವಿದ್ದು, ಇದಕ್ಕೆ ಎಲ್ಲ ಸದಸ್ಯರ ಸಹಕಾರ ಅತ್ಯಗತ್ಯ ಎಂದು ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಎ.ಜಿ. ಹನುಮಂತಪ್ಪ ಹೇಳಿದರು.

ಪಟ್ಟಣದ ಹಳೇ ಆಸ್ಪತ್ರೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ 8ನೇ ವರ್ಷದ ವಾರ್ಷಿಕ ಸಾಮಾನ್ಯ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದ 8 ವರ್ಷಗಳಿಂದ ಹಿರಿಯ ನಾಗರೀಕರ ಸಹಕಾರ ಸಂಘವನ್ನು ಉತ್ತಮ ರೀತಿ ನಡೆಸಿಕೊಂಡು ಬರಲಾಗುತ್ತಿದ್ದು , ಸಂಘಕ್ಕೆ ಹೆಚ್ಚಿನ ಆರ್ಥಿಕ ಸದೃಢತೆ ತಂದು ಕೊಡಲು ಸಂಘದಲ್ಲಿ ಎಲ್ಲರೂ ಹೆಚ್ಚಿನ ಉಳಿತಾಯ, ಇಡುಗಂಟು ತೊಡಗಿಸಬೇಕಾಗಿದೆ. ಹಣಕ್ಕೆ ಭಧ್ರತೆಯಾಗಿ ಬಾಂಡ್ ನೀಡಲಾಗುತ್ತದೆ ಜತೆಗೆ ಶೇ. 75ರಷ್ಟು ಸಾಲ ಸೌಲಭ್ಯ ಕೂಡ ಒದಗಿಸಲಾಗುತ್ತದೆ ಎಂದು ವಿವರಿಸಿದರು.

ಸಂಘದ ನಿರ್ದೇಶಕ ಎಂ. ಬಾಬು ಮಾತನಾಡಿ, ಎಲ್ಲ ನಿರ್ದೇಶಕರು ಕಡ್ಡಾಯವಾಗಿ ಸಹಕಾರ ಸಂಘಕ್ಕೆ ಡಿಫಾಸಿಟ್ ನೀಡಬೇಕು ಜತೆಗೆ ಸಂಘದ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಸಂಘದ ಮಾಜಿ ಅಧ್ಯಕ್ಷ ಬೆನಕನಹಳ್ಳಿ ಸಿ. ವೀರಪ್ಪ ಮಾತನಾಡಿ, ಸಂಘದಲ್ಲಿ ಹಣ ತೊಡಗಿಸುವವರು ಯಾವುದೇ ಆತಂಕ ಪಡಬೇಕಾಗಿಲ್ಲ. ನೀವು ತೊಡಗಿಸಿದ ಹಣವನ್ನು ಸಂಘ ಡಿಸಿಸಿ ಬ್ಯಾಂಕ್‌ನಲ್ಲಿ ತೊಡಗಿಸುತ್ತದೆ ಎಂದರು.

ಸಂಘದ ಉಪಾಧ್ಯಕ್ಷ ಎಚ್.ಪಿ. ಗುರುಮೂರ್ತಿ, ಪತ್ರಕರ್ತ ಮೃತ್ಯುಂಜಯ ಪಾಟೀಲ್, ರೈತ ಮುಖಂಡ ಕೆ.ಸಿ. ಬಸಪ್ಪ, ಸಂಘದ ನಿರ್ದೇಶಕ ಎಚ್.ಎ. ಚಂದ್ರಕುಮಾರ್ ಮಾತನಾಡಿದರು.

ಚೈತ್ರಾ ಮತ್ತು ನಳಿನಾ ಪ್ರಾರ್ಥಿಸಿದರು. ಪಿ. ವೀರಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು. ಚಂದ್ರಕುಮಾರ್ ವಂದಿಸಿದರು.

ಸಂಘದ ನಿರ್ದೇಶಕರಾದ ದೊಡ್ಡಹಾಲೇಶಪ್ಪ, ಆರ್. ಶೇಖರಪ್ಪ, ಜಿ.ಎಸ್. ಬಸವರಾಜು, ಬಿ.ಎನ್. ಈಶ್ವರಪ್ಪ, ಬಸವಬೋವಿ, ಗೌರಮ್ಮ, ಮೀನಾಕ್ಷಮ್ಮ, ಮಂಜಪ್ಪ, ಕಾರ್ಯದರ್ಶಿ ಕೆ.ಎಸ್. ಸಿದ್ದಬಸಪ್ಪ, ಸಿಬ್ಬಂದಿಗಳಾದ ನಿಂಗಪ್ಪ, ಚಂದ್ರಪ್ಪ ಇದ್ದರು.