ಜಿಲ್ಲೆ

ಜ್ಞಾನದ ಜತೆ ಮಾನವೀಯತೆ ಮೈಗೂಡಿಸಿಕೊಳ್ಳಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಾವೆಲ್ಲ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಜೀವಿಸುತ್ತಿದ್ದೇವೆ. ನಮ್ಮಲ್ಲಿರುವುದನ್ನು ಬಡವರು, ಅನಾಥರು, ನಿರ್ಗತಿಕರಿಗೆ ಕೊಟ್ಟು ಅವರೊಂದಿಗೆ ಆಚರಿಸಿದಾಗ ಕ್ರಿಸ್‌ಮಸ್ ಪರಿಪೂರ್ಣವಾಗುತ್ತದೆ ಎಂದು ಉತ್ತರ ಕರ್ನಾಟಕ ಸಭಾಪ್ರಾಂತ್ಯದ ಬಿಷಪ್ ಹಾಗೂ ಬಾಸೆಲ್ ಮಿಶನ್ ಉಚ್ಛ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮಾರ್ಟಿನ್ ಸಿ. ಬೊರಾಗಾಯಿ ಹೇಳಿದರು.

ನಗರದ ಕಿಟೆಲ್ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಕ್ರಿಸ್ತ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಿಡಿಪಿಯು ಕೆ.ಪಿ. ಸುರೇಶ ಮಾತನಾಡಿ, ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ಕ್ರಿಸ್ತ ಮಿಷನರಿಗಳ ಸೇವೆ ಅನನ್ಯ. ವಿದ್ಯಾರ್ಥಿಗಳು ಕಲಿತ ಶಿಕ್ಷಣ ಸಂಸ್ಥೆಗೆ ಹೆಮ್ಮೆ ತರುವಂಥ ಸಾಧನೆ ಮಾಡಬೇಕು ಎಂದರು.

ಸಿಎಸ್‌ಐ ಕೆಎನ್‌ಡಿಯ ಮುಖ್ಯ ಆಡಳಿತಾಧಿಕಾರಿ ವಿಜಯಕುಮಾರ ದಂಡಿನ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ತೋರಿಸಲು ಹಲವಾರು ಅವಕಾಶಗಳಿವೆ. ಅವುಗಳ ಸದುಪಯೋಗ ಪಡಿಸಿಕೊಂಡು ಗುರಿ ತಲುಪಲು ಪ್ರಯತ್ನಿಸಬೇಕು ಎಂದರು.

ಪ್ರೊ. ಜೆ.ಎಸ್. ಕುರಿ ಮಾತನಾಡಿ, ಮಹಾತ್ಮಾ ಗಾಂಧೀಜಿಯವರ ತತ್ವಗಳು ಜೀವನಕ್ಕೆ ದಾರಿದೀಪ. ಮಾನವೀಯತೆ ಇಲ್ಲದಿರುವುದು ಜ್ಞಾನವಲ್ಲ. ಜ್ಞಾನದೊಂದಿಗೆ ಮೌಲ್ಯಗಳನ್ನು ಬೆಳೆಸಿಕೊಳ್ಳಿ ಎಂದರು.

ಸಿಎಸ್‌ಐ, ಕೆಎನ್‌ಡಿಯ ಖಜಾಂಚಿ ಸತ್ಯಬಾಬು ಸಾಮ್ಯುವೆಲ್, ಕಾರ್ಯದರ್ಶಿ ವಿಲ್ಸನ್ ಮೈಲಿ, ಪ್ರಾಚಾರ್ಯೆ ಡಾ. ಕಮಲಾ ಢವಳೆ ಹಾಗೂ ಬೋಧಕರು ಉಪಸ್ಥಿತರಿದ್ದರು.

ಸವಿತಾ ನಂದಿಕೇಶ್ವರ ವಾರ್ಷಿಕ ವರದಿ ವಾಚಿಸಿದರು. ಕಿರಣ್ ಮಲ್ಯಾಗೋಳ ಪ್ರಾರ್ಥಿಸಿದರು. ಸಲೀಂ ಜಕ್ಕಲಿ ಸ್ವಾಗತಿಸಿದರು. ಮಂಜುನಾಥ ತಿಗಡಿ ವಂದಿಸಿದರು.