ಜಿಲ್ಲೆ

ವೈಚಾರಿಕತೆ ಸಮಾಜ ತಿದ್ದುವ ಮುಖ್ಯ ಅಸ್ತ್ರ: ಹೋರಾಟಗಾರ್ತಿ ಸುನಂದಾ ಜಯರಾಂ ಅಭಿಮತ

ಮಂಡ್ಯ: ವೈಚಾರಿಕತೆ ಸಮಾಜವನ್ನು ತಿದ್ದುವ ಮುಖ್ಯವಾದ ಅಸ್ತ್ರ ಎಂದು ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಹೇಳಿದರು.

ನಾಗಮಂಗಲ ತಾಲೂಕು ದೇವಲಾಪುರ ಹೋಬಳಿಯ ಚೌದರಿ ಕೊಪ್ಪಲು ಗ್ರಾಮದಲ್ಲಿ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಡಾ.ಹೂ.ಶ್ರೀನಿವಾಸಯ್ಯ ಚಾರಿಟೇಬಲ್ ಟ್ರಸ್ಟ್, ಗಾಂಧಿ ಭವನ ಬೆಂಗಳೂರು ಹಾಗೂ ಚೌದ್ರಿ ಗ್ರಾಮ ಅಭಿವೃದ್ಧಿ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಯುವಜನತೆ ಹಾಗೂ ವೈಚಾರಿಕ ಚಿಂತನೆ ಕುರಿತು ಉಪನ್ಯಾಸ ನೀಡಿದರು.

ವೈಚಾರಿಕತೆ ಮತ್ತು ಬೌದ್ಧಿಕತೆ, ವಿಚಾರವಾದಗಳಿಗೆ ಮೌಲ್ಯ ಬರುವುದು ಅದು ಜೀವನ ಮೌಲ್ಯಗಳಿಂದ ಸಮೃದ್ಧವಾದಾಗ ಮಾತ್ರ. ಜೀವನ ಮೌಲ್ಯವೆಂದರೆ ಸತ್ಯ, ಅಹಿಂಸೆ, ಶೀಲ, ಸಂಯಮ, ದಯೆ, ಕ್ಷಮೆ, ತನ್ನಂತೆ ಪರರ ಬಗೆಯುವ ರೀತಿ, ಬೌದ್ಧಿಕ ಪ್ರಾಮಾಣಿಕತೆ ಮಾನವೀಯ ಗುಣಗಳು ಎಂದರು.

ವೈಚಾರಿಕತೆ ಒಬ್ಬ ವ್ಯಕ್ತಿಯ ರಾಜಕೀಯ, ಸಾಮಾಜಿಕ, ಧಾರ್ಮಿಕ ಇಲ್ಲವೇ ಅವನ ವೈಯಕ್ತಿಕ ಬದುಕಿನ ಚಿಂತನೆಗೆ ಎಡೆಮಾಡಿ ಕೊಡುತ್ತದೆ. ಪರಂಪರೆಯಿಂದ ಬಂದದ್ದನ್ನೆಲ್ಲ ಕಿತ್ತೊಗೆಯಬೇಕು. ಬದಲಿಗೆ ನಮ್ಮ ಅನುಸರಣೆಗಳಲ್ಲಿ ವೈಜ್ಞಾನಿಕ ಸತ್ಯವಿದೆಯೇ ಎಂದು ವಿಮರ್ಶಿಸಿ ನಿರ್ಧರಿಸಬೇಕು. ನಮ್ಮ ಪುರಾತನ ಸಂಸ್ಕೃತಿಯನ್ನು ಹೊಂದಿರುವ ದೇಶ ಭಾರತ. ಮಧ್ಯಮ ಯುಗದ ಚಿಂತನೆ ಮತ್ತು ಧಾರ್ಮಿಕ ಚಿಂತನೆಗಳು ಇಲ್ಲಿನ ಜನಜೀವನದ ಮೇಲೆ ಹೆಚ್ಚು ಪ್ರಭಾವ ಬೀರಿದವು. ಅವುಗಳಲ್ಲಿ ಕೆಲವು ವೈಜ್ಞಾನಿಕ ತಳಹದಿಯನ್ನು ಹೊಂದಿದ್ದರೆ, ಇನ್ನುಳಿದವು ಆ ಕಾಲದ ಊಹಾಪೋಹಗಳಿಂದ ಸೇರಿಕೊಂಡವು. ಅವುಗಳೆಲ್ಲವನ್ನು ವೈಚಾರಿಕತೆಗೆ ಒಳಪಡಿಸುವ ಕೆಲಸ ಈ ತಲೆಮಾರಿನಲ್ಲಿ ಆಗುತ್ತಿರುವುದು ಪ್ರಗತಿಪರ ಚಿಂತನೆಯೇ ಆಗಿದೆ ಎಂದರು.

ವೈಜ್ಞಾನಿಕ ತಳಹದಿ ಇಲ್ಲದ ಮೂಢನಂಬಿಕೆಗಳು ಪ್ರಗತಿಗೆ ಅಡಚಣೆಗಳಾಗಿವೆ. ಯಾವುದೋ ಕಾಲ ಘಟ್ಟದಲ್ಲಿ ಸಕಾರಣವಿಲ್ಲದೆ ಪ್ರಾರಂಭವಾದ ಇಂತಹ ಆಚರಣೆಗಳಿಂದ ಹೊರಬರುವುದು ಇಂದಿನ ಅಗತ್ಯವಾಗಿದೆ. ಅವು ನಮ್ಮ ದೈನಂದಿನ ಬದುಕನ್ನು ಭಾದಿಸುತ್ತವೆ. ಜತೆಗೆ ಮಾನಸಿಕ ಕಿರಿಕಿರಿಯನ್ನು ಉಂಟು ಮಾಡುತ್ತವೆ. ಆದ್ದರಿಂದ ಬದುಕನ್ನು ಭಾದಿಸುವ ಹಾಗೂ ವೈಜ್ಞಾನಿಕ ತಳಹದಿ ಇಲ್ಲದ ಆಚರಣೆಗಳಿಂದ ದೂರ ವಿರೋಣ. ಇದನ್ನು ಸಾಮೂಹಿಕ ನೆಲೆಯಲ್ಲಿ ಕಾರ್ಯ ರೂಪಕ್ಕೆ ತರಬೇಕಾದರೆ ಬಹಳಷ್ಟು ಕಾಲಾವಕಾಶ ಬೇಕಾಗಬಹುದು. ಆದರೆ ವೈಯಕ್ತಿಕ ನೆಲೆಯಲ್ಲಿ ಅನುಸರಿಸುವುದು ನಮ್ಮ ಕೈಯ್ಯಲ್ಲಿದೆ. ಅದನ್ನು ಕಾರ್ಯಗತಗೊಳಿಸುವ ಮೂಲಕ ನಾವು ಪ್ರಜ್ಞಾವಂತರಾಗಿ ಕೆಲಸ ಮಾಡಲು ಸಾಧ್ಯವೆಂದು ತಿಳಿಸಿದರು.

ಅಧ್ಯಕ್ಷತೆಯನ್ನು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ ವಹಿಸಿದ್ದರು. ಉಪನ್ಯಾಸಕರಾದ ರಘುನಾಥ್ ಸಿಂಗ್, ಎಚ್.ಆರ್.ಲಕ್ಷ್ಮೀ, ಜಯರಾಮ್, ಮೋಹನ್‌ಕುಮಾರ್, ಹರೀಶ್ ಇತರರಿದ್ದರು.