ಜಿಲ್ಲೆ

ಪ್ರಕಾಶಕರ ಸಂಘದಿಂದ ವಾರ್ಷಿಕ ಪ್ರಶಸ್ತಿ ಪ್ರದಾನ

ಬೆಂಗಳೂರು: ಹಿಂದೆಂದೂ ಕಾಣದಷ್ಟು ದೀರ್ಘಾವಧಿಯಲ್ಲಿ ಯಾಕೆ ಈ ಬಾರಿ ಲೋಕಸಭಾ ಚುನಾವಣೆ ನಡೆಯುತ್ತಿದೆ ಎಂಬ ಬಗ್ಗೆ ಆಡಳಿತ ಪಕ್ಷ, ಚುನಾವಣಾ ಆಯೋಗ, ಪ್ರತಿಪಕ್ಷ ಹಾಗೂ ಪ್ರಜ್ಞಾವಂತರ ವಿಶ್ಲೇಷಣೆ ಬೇರೆ ಬೇರೆ ರೀತಿಯಲ್ಲಿವೆ. ಪ್ರಧಾನಿಯಿಂದ ಆರಂಭವಾಗಿ ಶಾಸಕರೆಲ್ಲರು ಬಹುಮತ ಗಳಿಸುವ ಬಗ್ಗೆ ಚಿಂತಿಸುತ್ತಿದ್ದಾರೆ. ಇದಕ್ಕಾಗಿ ವ್ಯಕ್ತವಾಗುತ್ತಿರುವ ಹೇಳಿಕೆ, ಆಶ್ವಾಸನೆ, ತರಾಟೆ, ಕೆರಳಿಸುವ ಮಾತುಗಳು ಪ್ರಹಸನದಂತೆ ನಡೆಯುತ್ತಿದೆ ಎಂದು ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಭೈರಮಂಗಲ ರಾಮೇಗೌಡ ಅಭಿಪ್ರಾಯಪಟ್ಟರು.

ಕರ್ನಾಟಕ ಪ್ರಕಾಶಕರ ಸಂ ಹಾಗೂ ಬಿಎಂಶ್ರೀ ಪ್ರತಿಷ್ಠಾನದ ವತಿಯಿಂದ ಮಂಗಳವಾರ ಎ.ಆರ್​.ಕಾಲನಿಯ ಬಿಎಂಶ್ರೀ ಪ್ರತಿಷ್ಠಾನದ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಪುಸ್ತಕ ದಿನ, ಗ್ರಂಥಸ್ವಾಮ್ಯ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಮತಯಾಚನೆ ಸಂದರ್ಭದಲ್ಲಿ ರಾಜಕೀಯ ನಾಯಕರು ಏನೇನು ಹೇಳಿಕೆ ಕೊಡುತ್ತಿದ್ದಾರೆ ಎಂಬುದು ಎಲ್ಲರ ಕಣ್ಣ ಮುಂದಿದೆ. ದೇಶದ ಉದ್ಧಾರದ ಬಗ್ಗೆ ಚಿಂತನೆ ನಡೆದಿದೆಯಾ? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಹಿಂದಿನ ಆಶ್ವಾಸನೆಗಳು ಎಷ್ಟು ಈಡೇರಿವೆ ಎಂಬ ಆತ್ಮಾವಲೋಕನೆ ನಡೆಯುತ್ತಿಲ್ಲ. ಹಳೆಯ ಪ್ರಣಾಳಿಕೆಗಳು ಹೊಸ ಮಾತಿನೊಂದಿಗೆ ಪುನರಾವರ್ತನೆಯಾಗುತ್ತಿವೆ ಎಂದರು.

ಮನೆಯೇ ಮೊದಲ ಪಾಠ ಶಾಲೆಯಾಗದ ಪರಿಣಾಮ ಕೆಲವರು ಸಾರ್ವಜನಿಕವಾಗಿ ಕೆರಳಿಸುವ ಭಾಷಣ ಮಾಡುತ್ತಿದ್ದಾರೆ. ಹೆತ್ತವರು ಬಾಲ್ಯದಲ್ಲೇ ಇವರಿಗೆ ಓದಿನ ರುಚಿ ಹತ್ತಿಸುತ್ತಿದ್ದರೆ, ಸಮಾಜದಲ್ಲಿಂದು ದ್ವೇಷದ ಮಾತುಗಳು ಕೇಳಿ ಬರುತ್ತಿರಲಿಲ್ಲ. ಸಮಾಜದಲ್ಲಿ ದ್ವೇಷಕ್ಕೆ ಕಾರಣವಾಗುತ್ತಿರುವ ಅಂಶಗಳು ಯಾವುವು ಎಂಬುದನ್ನು ಪ್ರಜ್ಞಾವಂತರು ಅರಿತುಕೊಳ್ಳಬೇಕು ಎಂದು ತಿಳಿಸಿದರು.

ವಿಮರ್ಶಕಿ ಡಾ.ಎಂ.ಎಸ್​.ಆಶಾದೇವಿ ಮಾತನಾಡಿ, ಪತ್ರಿಕೋದ್ಯಮ ಹಾಗೂ ಪುಸ್ತಕೋದ್ಯಮ ಭವಿಷ್ಯದ ಬಗ್ಗೆ ನೂರು ಪ್ರಶ್ನೆಗಳು ಹುಟ್ಟಿಕೊಳ್ಳುವ ಹೊತ್ತಿನಲ್ಲಿ, ಹೊಸ ಹೊಸ ಪುಸ್ತಕಗಳು ಪ್ರಕಟಣೆಯಾಗುತ್ತಲೇ ಇವೆ. ಓದಿನ ರುಚಿ ಹೊಂದಿರುವವರಲ್ಲಿ ಪುಸ್ತಕದ ಮೇಲಿನ ಪ್ರೀತಿ ಎಂದಿಗೂ ಕಡಿಮೆಯಾಗುವುದಿಲ್ಲ. ಡಿಜಿಟಲ್​ ಓದು ವಿಸ್ತರಿಸಿಕೊಳ್ಳುತ್ತಿದೆ. ಆದರೆ ಕೈಯಲ್ಲಿ ಪುಸ್ತಕ ಹಿಡಿದುಕೊಂಡು ಓದುವಾಗ ಸಿಗುವ ಸಂತಸ ಡಿಜಿಟಲ್​ ಓದಿನಿಂದ ಸಿಗುವುದಿಲ್ಲ. ಓದು ಬದುಕಿನ ಅನೇಕ ದುರಂತಗಳಿಂದ ಪಾರು ಮಾಡುತ್ತದೆ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಕಾಶಕಿ ರೂಪ ಮತ್ತೀಕೆರೆ ಅವರಿಗೆ 'ನಂಜನಗೂಡು ತಿರುಮಲಾಂಬ ಮಹಿಳಾ ಪ್ರಕಾಶಕಿ ಪ್ರಶಸ್ತಿ' ಹಾಗೂ ಪ್ರಕಾಶಕ ನಿಂಗರಾಜ ಚಿತ್ತಣ್ಣನವರ್​ ಅವರಿಗೆ 'ಡಾ.ಎಂ.ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿ' ನೀಡಿ ಗೌರವಿಸಲಾಯಿತು.

ಹಿರಿಯ ಕಾದಂಬರಿಕಾರ ಕೆ.ಎನ್​.ಗಣೇಶಯ್ಯ, ಕರ್ನಾಟಕ ಪ್ರಕಾಶಕರ ಸಂದ ಅಧ್ಯಕ್ಷ ಪ್ರಕಾಶ್​ ಕಂಬತ್ತಳ್ಳಿ, ಉಪಾಧ್ಯೆ ಡಾ.ವಸುಂಧರಾ ಭೂಪತಿ, ಖಜಾಂಚಿ ಬಿ.ಎಸ್​.ವಿದ್ಯಾರಣ್ಯ ಮತ್ತಿತರರಿದ್ದರು.