ವಿಜಯವಾಣಿ ಸುದ್ದಿಜಾಲ ನಂದಗುಡಿ
ಹಾಲು ಉತ್ಪಾದಕರಿಗೆ ಸರ್ಕಾರ ಮತ್ತು ಬಮುಲ್‌ನಿಂದ ಹೆಚ್ಚುವರಿಯಾಗಿ ಪ್ರೋತ್ಸಾಹ ಧನ ನೀಡಿ, ಆರ್ಥಿಕ ಮಟ್ಟ ಉತ್ತಮ ಪಡಿಸುವ ದಿಸೆಯತ್ತ ಮುನ್ನಡೆಯುತ್ತಿದೆ. ಕೃಷಿಕರು ಹೆಚ್ಚಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಉತ್ತೇಜಿಸಬೇಕು ಎಂದು ಜಿಪಂ ಮಾಜಿ ಸದಸ್ಯ ಕಲ್ಲಪ್ಪ ತಿಳಿಸಿದರು.
ಹೋಬಳಿಯ ಶಿವನಾಪುರದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ 2022-23ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ಕೃಷಿಕರು ಹೈನುಗಾರಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದರಿಂದ ಹೈನೋದ್ಯಮ ಬೆಳವಣಿಗೆ ಕಾಣಲು ಸಾಧ್ಯವಾಗುತ್ತದೆ. ಆರ್ಥಿಕ ಸಂಕಷ್ಟದಿಂದ ಪಾರಾಗಲು ಹೈನುಗಾರಿಕೆ ರೈತರಿಗೆ ವರದಾನವಾಗಿದೆ. ರೈತರು ಗುಣಮಟ್ಟದ ಹಾಲು ಪೂರೈಸಿದರೆ, ಸಂಘ ಸರ್ವತೋಮುಖ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ಹಾಲು ಉತ್ಪಾದಕರಿಗೆ ಹಾಗೂ ರಾಸುಗಳಿಗೆ ಬಮುಲ್ ವತಿಯಿಂದ ವಿಮಾ ಯೋಜನೆ ಕಡ್ಡಾಯವಾಗಿರುತ್ತದೆ. ಗುಣಮಟ್ಟದ ಹಾಲನ್ನು ಪಡೆಯಲು ರಾಸುಗಳಿಗೆ ಒಳ್ಳೆಯ ಪೌಷ್ಟಿಕಾಂಶ ಭರಿತ ಆಹಾರವನ್ನು ನೀಡುವುದಲ್ಲದೆ, ರೋಗಗಳು ಬಾರದಂತೆ ಕಾಲ-ಕಾಲಕ್ಕೆ ಲಸಿಕೆ ಹಾಕಿಸಬೇಕು. ಈ ಯೋಜನೆಗಳ ಸದುಪಯೋಗ ಪಡೆಯುವಂತೆ ಉತ್ಪಾದಕರಲ್ಲಿ ಮನವಿ ಮಾಡಿದರು.
ಅಧ್ಯಕ್ಷ ಎಸ್.ಕೆ.ಸೋಮಶೇಖರ್ ಮಾತನಾಡಿ, ಗುಣಮಟ್ಟದ ಹಾಲನ್ನು ಸರಬರಾಜು ಮಾಡಿ, ಆರ್ಥಿಕ ಮಟ್ಟವನ್ನು ಉತ್ತಮ ಪಡಿಸಿಕೊಳ್ಳಬೇಕು. ಪಶು ಆಹಾರ, ಮಿನರಲ್ ಮಿಕ್ಸರ್, ಗೋದಾರ್ ಶಕ್ತಿ ಪೌಷ್ಟಿಕಾಂಶವನ್ನು ಸಂಘದಿಂದ ವಿತರಿಸಲಾಗುತ್ತಿದೆ. 2022-23ನೇ ಸಾಲಿನಲ್ಲಿ 3.43 ಲಕ್ಷ ರೂ. ನಿವ್ವಳ ಲಾಭ ಪಡೆದಿದೆ. ಲಾಭಾಂಶದಲ್ಲಿ ಶೇ.2.31 ಬೋನಸ್ ನೀಡಲಾಗುತ್ತಿದೆ. ರಾಸು ವಿಮೆ ಮಾಡಿಸುವುದು ಕಡ್ಡಾಯವಾಗಿದೆ ಎಂದರು.
ನಿರ್ದೇಶಕರಾದ ರಿಯಾಜ್ ಅಹಮದ್, ಮುನಿನಂಜಪ್ಪ, ಎಸ್.ಕೆ.ಮುನಿಯಪ್ಪ, ಚಿಕ್ಕಮುನಿಯಪ್ಪ, ನಾಗರಾಜ, ಸಿದ್ದೇಗೌಡ, ನಾರಾಯಣಸ್ವಾಮಿ, ಮುನಿಕೃಷ್ಣಪ್ಪ, ದ್ಯಾವಮ್ಮ, ಪಿ.ಸಿ.ಶಾಂತಮ್ಮ, ಮಾಜಿ ಅಧ್ಯಕ್ಷ ವೆಂಕಟೇಶಪ್ಪ, ಮುಖ್ಯ ಕಾರ್ಯನಿರ್ವಾಹಕ ಎಸ್.ಕೆ.ಮುನೇಗೌಡ, ಹಾಲು ಪರೀಕ್ಷಕ ಎನ್.ನರಸಿಂಹಯ್ಯ, ಸಹಾಯಕ ಎಸ್.ಎಂ.ಮೂರ್ತಿ, ಕಂಪ್ಯೂಟರ್ ಆಪರೇಟರ್ ಎಸ್.ಮಧುಸೂದನ್ ಇದ್ದರು.