ಮಡಿಕೇರಿ:
ಉತ್ಸವಗಳಂಥ ಸಂಭ್ರಮದ ಸಂದರ್ಭ ಜನಜಂಗುಳಿ ಸೇರುವ ವೇಳೆ ಸಾಕಷ್ಟು ಕಿರಿಕಿರಿ ಉಂಟು ಮಾಡುವ ಪುಟ್ಟ ಪೀಪೀ ದಸರಾ, ಜಾತ್ರೆಗೆ ಸಂಬಂಧಿಸಿದ ಪೂರ್ವಭಾವಿ ಸಭೆಗಳಲ್ಲೂ ದೊಡ್ಡ ಸದ್ದು ಮಾಡುತ್ತಿದೆ. ಹೌದು, ’ಕರ್ಕಶ ಶಬ್ಧ ಮಾಡುವ ಪೀಪೀ ನಿಷೇಧಿಸಿ…’ ಎನ್ನುವ ಕೂಗು ಮಡಿಕೇರಿಯಲ್ಲಿ ಕೇಳಿಬರುತ್ತಿದೆ. ಇಂಥ ಪೀಪೀಗಳನ್ನು ಬಳಸಿಕೊಂಡು ಪುಂಡರು ಮಾಡುವ ಕೀಟಲೆಗಳಿಗೆ ಈ ಬಾರಿ ಕಡಿವಾಣ ಹಾಕಲೇಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ನೋಡುವುದಕ್ಕೆ ಅದೊಂದು ವಾಹನಗಳ ಹಾರ್ನ್‌ಗಳಂತೆ ಕಾಣುವ ಚಿಕ್ಕ ಸಾಧನ. ಆದರೆ ಬಾಯಲ್ಲಿ ಇಟ್ಟು ಊದಿದರೆ ಅದು ಮಾಡುವ ಶಬ್ಧ ಕರ್ಣ ಕಠೋರ. ಕೀಟಲೆ ಮಾಡುವ ಮಕ್ಕಳು, ಪುಂಡ-ಪೋಕರಿಗಳ ಕೈಗೆ ಸಿಕ್ಕಿದರಂತೂ ಪರಿಣಾಮ ಭೀಕರ. ದಸರಾ, ಜಾತ್ರೆ, ಊರು ಹಬ್ಬ ಮತ್ತಿತರ ಜನಜಂಗುಳಿ ಸೇರುವ ಸಂದರ್ಭಗಳಲ್ಲಿ ಆಟಿಕೆಗಳ ಅಂಗಡಿಯಲ್ಲಿ ಸಾಮಾನ್ಯವಾಗಿ ಹೆಚ್ಚು ಮಾರಾಟವಾಗುವ ಕರ್ಕಶ ಶಬ್ಧ ಹೊರಡಿಸುವ ಪೀಪೀಗಳ ಕತೆ ಕ್ಷುಲ್ಲಕ ಎನ್ನುವಂತೆ ಕಂಡುಬರುತ್ತದೆ. ಆದರೆ ಇವುಗಳ ಹಾವಳಿ ದಸರಾ, ಜಾತ್ರೆ ಮುಗಿದು ವಾರಗಳೇ ಕಳೆದರೂ ಕಿವಿಯಲ್ಲಿ ಮತ್ತೆ ಮತ್ತೆ ಅನುರಣಿಸುತ್ತಿರುತ್ತದೆ.
ಮಡಿಕೇರಿ ದಸರಾ ದಶಮಂಟಪಗಳ ಮೆರವಣಿಗೆ ವೇಳೆ ಅಬ್ಬರದ ಡಿಜೆ ಯುವಕರನ್ನು ಹೆಚ್ಚೆದ್ದು ಕುಣಿಯುವಂತೆ ಮಾಡಿದರೆ, ಇವುಗಳ ಮಧ್ಯೆ ತೂರಿ ಬರುವ ಪೀಪೀಯ ಕರ್ಕಶ ಶಬ್ಧ ಸಾಕಷ್ಟು ಕಿರಿ ಕಿರಿಗೆ ಕಾರಣವಾಗುತ್ತದೆ. ದಸರಾ ವೇಳೆ ಮಹಿಳೆಯರು, ಯುವತಿಯರನ್ನು ಚುಡಾಯಿಸುವುದಕ್ಕೋಸ್ಕರವೇ ಪುಂಡರು ಇಂಥ ಪೀಪೀಗಳನ್ನು ಖರೀದಿಸಿ ಅವರ ಎದುರು ಅಥವಾ ಕಿವಿಯ ಬಳಿ ಊದಿ ತೊಂದರೆ ಕೊಡುವ ಘಟನೆಗಳು ಈ ಹಿಂದಿನ ದಸರಾ ವೇಳೆ ನಡೆದಿದೆ. ಇದೇ ಕಾರಣಕ್ಕೆ ಜಗಳಗಳು ಹುಟ್ಟಿಕೊಳ್ಳುವುದು ಕೂಡ ಸಾಮಾನ್ಯವಾಗಿದೆ.
ಕಳೆದ ವರ್ಷವೂ ಇಂಥ ’ಪೀಪೀ ಶೂರ’ರ ವಿರುದ್ಧ ವ್ಯಾಪಕ ಆಕ್ರೋಶ ಕಂಡುಬಂದಿತ್ತು. ಸಾಕಷ್ಟು ಮಂದಿ ಪೊಲಿಸರಿಗೆ ಮೌಖಿಕ ದೂರು ಕೊಟ್ಟಿದ್ದರು. ಹಾಗಾಗಿ ಈ ಹಾವಳಿಗೆ ಕಡಿವಾಣ ಹಾಕಲು ನಿರ್ಧರಿಸಿದ್ದ ಪೊಲೀಸರು ಪೀಪೀ ಊದುವವರ ವಿರುದ್ಧ ಕ್ರಮಗಳನ್ನು ತೆಗೆದುಕೊಂಡಿದ್ದರು. ’ಪೀಪೀ ಶೂರರು’ ಕಂಡು ಬಂದಾಗ ಅವರನ್ನು ಹಿಡಿದು ಸಾರ್ವಜನಿಕವಾಗಿ ಬಸ್ಕಿ ಹೊಡೆಸಲಾಗಿತ್ತು. ಪೀಪೀ ಶಬ್ಧದ ಭೀಕರತೆ ಮನದಟ್ಟು ಮಾಡಿಸಲು ಒಬ್ಬರ ಕಿವಿ ಬಳಿ ಮತ್ತೊಬ್ಬರಿಂದ ಪೀಪೀಯನ್ನು ಊದಿಸಲಾಗಿತ್ತು. ಆದರೂ ಕರ್ಕಶ ಶಬ್ಧಕ್ಕೆ ಸಂಪೂರ್ಣ ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ.
ಈ ವರ್ಷ ದಸರಾ, ಕಾವೇರಿ ತುಲಾ ಸಂಕ್ರಮಣ ಜಾತ್ರೆ ಸಂದರ್ಭದಲ್ಲಿ ಇಂಥಹ ಪೀಪೀಗಳ ಮಾರಾಟವನ್ನೇ ನಿಷೇಧಿಸುವಂತೆ ಒತ್ತಾಯಗಳು ಕೇಳಿಬರುತ್ತಿದೆ. ಜಾತ್ರೆ ಮತ್ತು ದಸರಾಕ್ಕೆ ಸಂಬಂಧಿಸಿದಂತೆ ನಡೆದ ಪೂರ್ವಭಾವಿ ಸಭೆಗಳಲ್ಲಿ ಬಹುತೇಕರು ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಕೂಡ ಈ ವಿಷಯದಲ್ಲಿ ಧ್ವನಿ ಎತ್ತಿದ್ದಾರೆ. ಪೀಪೀ ಬಳಸುವವರ ವಿರುದ್ಧ ಕ್ರಮದ ಜತೆಗೆ ಇವುಗಳನ್ನು ಮಾರಾಟ ಮಾಡದಂತೆಯೂ ನೋಡಿಕೊಂಡರೆ ಹಬ್ಬದ ಸಂಭ್ರಮವನ್ನು ನೆಮ್ಮದಿಯಿಂದ ಅನುಭವಿಸಬಹುದು ಎನ್ನುತ್ತಾರೆ ಸಾರ್ವಜನಿಕರು.