ಜಿಲ್ಲೆ

ಕೇಂದ್ರ ಬಜೆಟ್‌ನಲ್ಲಿ ಹೊಸ ಗೃಹಸಾಲ ಯೋಜನೆ ಘೋಷಣೆ ?

ಆರ್​​. ತುಳಸಿಕುಮಾರ್​

ಬೆಂಗಳೂರು: ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಮಧ್ಯಮ ವರ್ಗದ ಜನರಿಗೆ ಸ್ವಂತ ಸೂರು ಹೊಂದುವ ಕನಸು ಸಾಕಾರವಾಗುವ ಯೋಜನೆ ಕೇಂದ್ರ ಬಜೆಟ್ ಒಳಗೊಳ್ಳುವ ನಿರೀಕ್ಷೆ ಇದೆ. ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) ಮಾರ್ಪಡಿತ ಸಾಲ ಸಂಪರ್ಕಿತ ಸಬ್ಸಿಡಿ ಸ್ಕೀಂ (ಸಿಎಲ್‌ಎಸ್‌ಎಸ್) ಕೆಲವೊಂದು ಅಂಶಗಳನ್ನು ಒಳಗೊಂಡಂತೆ ಲಾನುಭವಿಗಳಿಗೆ ತಲುಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಈ ಸಂಬಂಧ ಯೋಜನೆಯ ಸ್ವರೂಪ ಅಂತಿಮ ಘಟ್ಟದಲ್ಲಿದ್ದು, ಫೆ.1ರಂದು ಹಣಕಾಸು ಸಚಿವರು 2024-25ನೇ ಸಾಲಿನ ಆಯವ್ಯಯದಲ್ಲಿ ಪ್ರಕಟಿಸುವ ಸಾಧ್ಯತೆ ಹೆಚ್ಚಿಸಿದೆ. ಯೋಜನೆಯು ಮಧ್ಯಮ ವರ್ಗಕ್ಕೆ ಮಾತ್ರ ಸೀಮಿತವಾಗಿರಲಿದೆ. ಬೆಂಗಳೂರು ಸೇರಿ ದೇಶದ ವಿವಿಧ ನಗರ/ಪಟ್ಟಣಗಳಲ್ಲಿ ನಗರ ವಾಸಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಸತಿ ಸಮಸ್ಯೆ ನಿವಾರಿಸುವ ಅನಿವಾರ್ಯತೆ ಇದೆ.

ಕಳೆದ ಸ್ವಾತ್ರಂತೋತ್ಸವ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯ ಮೇಲಿಂದ ಭಾಷಣ ಮಾಡುವ ವೇಳೆ ನಗರ ಪ್ರದೇಶದ ಮಧ್ಯಮ ವರ್ಗಕ್ಕೆ ಹೊಸ ಸೂರಿನ ಯೋಜನೆ ಜಾರಿಗೊಳಿಸುವ ಘೋಷಣೆ ಮಾಡಿದ್ದರು. ಆ ಬಳಿಕ ಅಕ್ಟೋಬರ್‌ನಲ್ಲಿ ಯೋಜನೆಯು ಜಾರಿಯಾಗಬೇಕಿತ್ತಾದರೂ, ಸಾಲ ಮಿತಿ ಹಾಗೂ ಸಬ್ಸಿಡಿ ಮೊತ್ತದ ಹೆಚ್ಚಳ ಆಖೈರಾಗದ ಕಾರಣ ತುಸು ವಿಳಂಬವಾಗಿದೆ. ಇತ್ತೀಚಿಗಷ್ಟೇ ಕೇಂದ್ರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವ ಹರ್ದೀಪ್‌ಸಿಂಗ್ ಪುರಿ ಅವರು ಯೋಜನೆ ಅಂತಿಮ ರೂಪ ಪಡೆಯುತ್ತಿದ್ದು, ಶೀಘ್ರವೇ ಯೋಜನೆಯ ಅಧಿಸೂಚನೆ ಹೊರಡಿಸುವ ಸುಳಿವು ನೀಡಿದ್ದರು. ಇದೀಗ ಕೇಂದ್ರ ಬಜೆಟ್‌ನಲ್ಲೇ ಯೋಜನೆಯನ್ನು ಅಡಕಗೊಳಿಸಿ ನಗರವಾಸಿಗಳ ಮನಗೆಲ್ಲಲು ಸರ್ಕಾರ ನಿರ್ಧರಿಸಿದೆ.

ಸಬ್ಸಿಡಿ ಮೊತ್ತ ಹೆಚ್ಚಳ:

2015ರ ಜೂನ್ ತಿಂಗಳಿನಲ್ಲಿ ಚಾಲನೆ ದೊರೆತಿದ್ದ ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) 2022ರ ಮಾರ್ಚ್‌ವರೆಗೆ ಚಾಲ್ತಿಯಲ್ಲಿಡಲು ಸರ್ಕಾರ ನಿರ್ಧರಿಸಿತ್ತು. ಹಲವು ರಾಜ್ಯಗಳ ಮನವಿ ಆಧರಿಸಿ 2024ರ ಮಾರ್ಚ್‌ವರೆಗೂ ವಿಸ್ತರಿಸಲಾಗಿದೆ. ಸ್ವತ: ಪ್ರಧಾನಿ ಸ್ವಾತಂತ್ರೋತ್ಸವ ದಿನದಂದು ೋಷಿಸಿರುವಂತೆ ಹೊಸ ಯೋಜನೆ ಅನ್ವಯ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಲಾಗುತ್ತದೆ. 20 ವರ್ಷದವರೆಗೆ ವಾರ್ಷಿಕ ಶೇ.9 ಬಡ್ಡಿದರ ವಿಧಿಸಲಾಗುತ್ತಿದೆ. ಗೃಹಸಾಲದ ಸಬ್ಸಿಡಿ ಪಡೆಯುವ ಮೊತ್ತವನ್ನು ಇಡಬ್ಲುೃಎಸ್, ಎಲ್‌ಐಜಿ ಹಾಗೂ ಎಂಐಜಿ - 1, 2 ವರ್ಗಕ್ಕೆ ಪ್ರತ್ಯೇಕ ಮಿತಿ ಇದೆ. ಈ ಬಾರಿ ಬಡ್ಡಿದರ ಶೇ.6.5 ನಿಗದಿಗೊಳಿಸಿ ಸಬ್ಸಿಡಿ ಮೊತ್ತವನ್ನು ದುಪ್ಪಟ್ಟುಗೊಳಿಸುವ ಸಾಧ್ಯತೆ ಇದೆ ಎಂದು ರಿಯಲ್ ಎಸ್ಟೇಟ್ ಉದ್ದಿಮೆದಾರರು ಲೆಕ್ಕಾಚಾರ ಹಾಕಿದ್ದಾರೆ.

ರಿಯಾಲ್ಟಿಗೆ ಬೂಮ್:

ದೇಶದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ದೆಹಲಿ ನಂತರ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಕಳೆದೊಂದು ದಶಕದಿಂದ ವಸತಿ ಹಾಗೂ ವಸತಿಯೇತರ ವಿಭಾಗದಲ್ಲಿ ಐಟಿ ಸಿಟಿ ತನ್ನ ಬೆಳವಣಿಗೆಯನ್ನು ಏರುಗತಿಯಲ್ಲೇ ದಾಖಲಿಸುತ್ತಿದೆ. ಕೊವಿಡ್ ಸಾಂಕ್ರಾಮಿಕದ ಬಳಿಕವೂ ಬೆಳವಣಿಗೆ ಹಾದಿ ಕುಂಠಿತವಾಗಿಲ್ಲ. ಬದಲಾಗಿ ರಾಜಧಾನಿ ಸುತ್ತ ಇನ್ನಷ್ಟು ಹೊಸ ವಸತಿ ಯೋಜನೆಗಳು ತಲೆಯೆತ್ತಲು ಪೂರಕ ವಾತಾವರಣ ನಿರ್ಮಾಣವಾಗಿದೆ. ಈಗ ಕೇಂದ್ರ ಸರ್ಕಾರ ಮಧ್ಯಮ ವರ್ಗದವರನ್ನು ಕೇಂದ್ರವಾಗಿರಿಸಿಕೊಂಡು ಯೋಜನೆ ಪ್ರಕಟಿಸಿದ್ದಲ್ಲಿ ಬೆಂಗಳೂರಿನ ರಿಯಾಲ್ಟಿ ವಲಯ ಮತ್ತಷ್ಟು ಬೂಮ್ ಆಗುವುದು ಖಚಿತ ಎಂಬ ಅನಿಸಿಕೆ ಬಿಲ್ಡರ್ಸ್‌ ವ್ಯಕ್ತವಾಗಿದೆ.

2ಬಿಎಚ್‌ಕೆಗೆ ಬೇಡಿಕೆ:

ನಗರದಲ್ಲಿ ವಾಸಿಸುವ ಸಣ್ಣ ಕುಟುಂಬಗಳು 2ಬಿಎಚ್‌ಕೆ ಮಾದರಿಯ ಮನೆ ಅಥವಾ ಫ್ಲ್ಯಾಟ್ ಹೊಂದಲು ಇಷ್ಟಪಡುತ್ತಾರೆ. ಮಧ್ಯಮ ವರ್ಗದವರರು 3ಬಿಎಚ್‌ಕೆಯತ್ತ ದೃಷ್ಟಿ ಹರಿಸಿದ್ದರೂ, ಕೈಗೆಟಕುವ ದರದಲ್ಲಿ ಸೂರು ಸಿಕ್ಕಲ್ಲಿ 2ಬಿಎಚ್‌ಕೆ ಖರೀದಿಸಲು ಆದ್ಯತೆ ನೀಡುತ್ತಾರೆ. ಹೀಗಾಗಿ ಕೇಂದ್ರ ಬಜೆಟ್‌ನಲ್ಲಿ ಹೊಸ ಗೃಹಸಾಲ ಯೋಜನೆ ಪ್ರಕಟವಾದಲ್ಲಿ 2ಬಿಎಚ್‌ಕೆ ಮನೆ/ಫ್ಲ್ಯಾಟ್​​ಗಳಿಗೆ ಇನ್ನಷ್ಟು ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ.