ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯ ಬಜೆಟ್‌ನಲ್ಲಿ ‘ದಸರಾ ಪ್ರಾಧಿಕಾರ’ ಘೋಷಣೆ ಮಾಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ದಸರಾ ಪ್ರಾಧಿಕಾರ ರಚನೆಯಾಗಬೇಕು ಎನ್ನುವುದು ಹಲವು ವರ್ಷಗಳ ಬೇಡಿಕೆಯಾಗಿದೆ. ಪ್ರತಿ ವರ್ಷ ದಸರಾ ಮಹೋತ್ಸವ ಹಾಗೂ ಬಜೆಟ್ ಸಂದರ್ಭದಲ್ಲೂ ಈ ಬಗ್ಗೆ ಅನೇಕ ಒತ್ತಾಯಗಳು ಕೇಳಿ ಬರುತ್ತಲೇ ಇವೆ. ಆದರೆ, ಇದನ್ನು ಜಾರಿಗೆ ತರಲು ಈವರೆಗೆ ಯಾವ ಪಕ್ಷದ ನಾಯಕರೂ ಇಚ್ಛಾಶಕ್ತಿ ಪ್ರದರ್ಶಿಸಿಲ್ಲ.
ವಿಶ್ವವಿಖ್ಯಾತ ನಾಡಹಬ್ಬ ದಸರಾವನ್ನು ವ್ಯವಸ್ಥಿತವಾಗಿ ಆಯೋಜಿಸಲು ಹಾಗೂ ಮತ್ತಷ್ಟು ಆಕರ್ಷಿಸುವಂತೆ ಮಾಡಲು ಪ್ರಾಧಿಕಾರದ ಅಗತ್ಯ ಇದೆ. ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎಂಬಂತೆ ದಸರಾ ಸಿದ್ಧತೆಗಳು ಪ್ರತಿ ಸಲವೂ ನಡೆಯುತ್ತಿವೆ. ಕೊನೆಯ 10 ದಿನಗಳಲ್ಲೇ ಎಲ್ಲ ತಯಾರಿ ನಡೆಯುತ್ತವೆ. ಆತುರ, ಅವಸರದಲ್ಲಿ ಅರೆಬರೆಯಾಗಿ, ಅವ್ಯವಸ್ಥೆಯಿಂದ ಕೆಲಸಗಳು ಜರುಗುತ್ತವೆ. ಹೀಗಾದರೆ ಗುಣಮಟ್ಟ ಉಳಿಯಲು ಸಾಧ್ಯವೇ? ಇದು ನೇರವಾಗಿ ದಸರಾ ಆಯೋಜನೆ ಮೇಲೆ ಪರಿಣಾಮ ಬೀರುತ್ತದೆ.
ಪ್ರತಿ ವರ್ಷ ಕೋಟ್ಯಂತರ ರೂ. ಖರ್ಚು ಮಾಡಿದರೂ ವ್ಯವಸ್ಥೆ ಮಾತ್ರ ಅಸ್ತವ್ಯಸ್ತವಾಗಿಯೇ ಇರುತ್ತದೆ. ಹಣ ಪೋಲಾಗುವುದು, ದುರ್ಬಳಕೆ ಆಗುವುದು ಮಾಮೂಲಿಯಂತಾಗಿದೆ. ಒಂದೇ ರೀತಿಯ ಕಾರ್ಯಕ್ರಮಗಳ ಆಯೋಜನೆಯಿಂದ ಹೆಚ್ಚು ಪ್ರವಾಸಿಗರನ್ನು ಸೆಳೆಯುವಲ್ಲಿ ವಿಲವಾಗುತ್ತಿದೆ. ಇಡೀ ವರ್ಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಉದ್ಯೋಗ ಅವಕಾಶ ಹಾಗೂ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲು ಕಾರಣವಾಗುತ್ತದೆ. ಈ ಕುರಿತು ಎಲ್ಲ ಮುಖ್ಯಮಂತ್ರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರಿಗೂ ಮನವಿ ನೀಡಲಾಗಿತ್ತು. ಮೈಸೂರಿನವರೇ ಆದ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಅರಿವಿತ್ತು. ಈ ಬಾರಿ ಸಿದ್ದರಾಮಯ್ಯ ದಸರಾ ಪ್ರಾಧಿಕಾರ ಘೋಷಣೆ ಮಾಡುತ್ತಾರೆ ಎಂದೇ ಎಲ್ಲರೂ ನಿರೀಕ್ಷೆ ಮಾಡಿದ್ದರು.
ಆದರೆ, ಈ ಕುರಿತು ಮುಖ್ಯಮಂತ್ರಿ ಯಾವುದೇ ಘೋಷಣೆ ಮಾಡಿಲ್ಲ. ಬದಲಿಗೆ ಯಾರೂ ಕೇಳದೆ ಇದ್ದರೂ ಶ್ರೀ ಚಾಮುಂಡೇಶ್ವರಿ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ಘೋಷಿಸಿದ್ದಾರೆ. ದೇವಸ್ಥಾನದ ಅಭಿವೃದ್ಧಿಗೆ ಮತ್ತು ಬೆಟ್ಟದ ಪರಿಸರ ಸಂರಕ್ಷಣೆಗೆ ಇದು ಬೇಕಿತ್ತು. ಇದರ ಜತೆಗೆ ವ್ಯವಸ್ಥಿತವಾಗಿ ನಾಡಹಬ್ಬವನ್ನು ಆಯೋಜಿಸಲು ದಸರಾ ಪ್ರಾಧಿಕಾರ ರಚನೆ ಅಗತ್ಯವಿದೆ. ಇದರಿಂದ ಮೈಸೂರು ಪ್ರವಾಸೋದ್ಯಮಕ್ಕೆ ಚೈತನ್ಯ ಬರಲಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರ ಗಂಭೀರವಾಗಿ ಯೋಚಿಸಬೇಕು.