ಜಿಲ್ಲೆ

ಚಂಪಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನಿಂದ 'ಚಂಪಕ ಕಲಾರತ್ನ' ಪ್ರಶಸ್ತಿ ಘೋಷಣೆ

ಮೈಸೂರು: ಚಂಪಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನಿಂದ ಭಾರತೀಯ ಕಲೆ ಹಾಗೂ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಾ ಬಂದಿರುವವರನ್ನು ಗೌರವಿಸುವ ಸಲುವಾಗಿ ಚಂಪಕ ಕಲಾರತ್ನ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ವಿದ್ವಾನ್ ಡಾ.ಎಚ್.ವಿ. ನಾಗರಾಜರಾವ್ (ಸಂಸ್ಕೃತ ಲೇಖಕರು ಹಾಗೂ ವಿದ್ವಾಂಸರು), ಡಾ.ಕೆ.ಅನಂತರಾಮು (ಕನ್ನಡ ಲೇಖಕರು), ಡಾ.ಮಾಣಿಕ್ ಎ.ವಿ.ಬೆಂಗೇರಿ (ಸಂಸ್ಕೃತ, ಮರಾಠಿ ಹಾಗೂ ಹಿಂದಿ ವಿದ್ವಾಂಸರು, ಲೇಖಕರು) ಹಾಗೂ ಗುರು ವಿದುಷಿ ಬಿ ಕೆ ವಸಂತಲಕ್ಷ್ಮೀ (ಭರತನಾಟ್ಯ ಗುರುಗಳು) ಅವರು ಈ ವರ್ಷದ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಏ.6 ರಂದು ಸಂಜೆ 5 ಗಂಟೆಗೆ ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ನಡೆಯಲಿದೆ. ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಎನ್.ಆರ್.ಸಂಸ್ಥೆಗಳ ಸಮುಚ್ಛಯದ ಅಧ್ಯಕ್ಷ ಆರ್.ಗುರು ಅತಿಥಿಯಾಗಿ ಆಗಮಿಸಲಿದ್ದು, ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಮಾಸಿಕ ಚಂಪಕ ರಾಷ್ಟ್ರೀಯ ಕಲಾ ಉತ್ಸವದ ಪಾಲ್ಗುಣ ಕಾರ್ಯಕ್ರಮವು ಜರುಗಲಿದೆ. ಚಂಪಕ ಅಕಾಡೆಮಿಯ ಸಂಸ್ಥಾಪಕಿ ವಿದುಷಿ ಡಾ. ನಾಗಲಕ್ಷ್ಮೀ ನಾಗರಾಜನ್ ಅವರು ಶ್ರೀಮದ್ ಶಂಕರ ದಿಗ್ವಿಜಯ-ದಿವ್ಯಾದ್ಭುತ ಬಾಲ್ಯಮ್ ಎಂಬ ವಿಷಯಾಧಾರಿತ ಕಾವ್ಯ ನಾಟಕವನ್ನು ಪ್ರಸ್ತುತಪಡಿಸಲಿದ್ದಾರೆ. ಗುರು ವಿದುಷಿ ಬಿ.ಕೆ.ವಸಂತಲಕ್ಷ್ಮೀ ಅವರ ಶಿಷ್ಯಂದಿರು ಮಧುರಾಗಮನಂ ಎಂಬ ಕಿರು ನೃತ್ಯ ನಾಟಕವನ್ನು ಪ್ರಸ್ತುತಪಡಿಸಿ ಗುರುವಿಗೆ ವಂದನೆ ಸಲ್ಲಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.