ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಹನೂರು ತಾಲೂಕಿನ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ತಾಲೂಕು ಸಾರ್ವಜನಿಕ ಹಿತರಕ್ಷಣಾ ಸಮಿತಿ ವತಿಯಿಂದ ಸೋಮವಾರ ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ಅವರಿಗೆ ಮನವಿ ಸಲ್ಲಿಸಲಾಯಿತು.
ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನೋದ್‌ಕುಮಾರ್ ಮಾತನಾಡಿ, ಮ.ಬೆಟ್ಟ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿರುವ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ. ಆದರೆ ಇಲ್ಲಿ ಭಕ್ತರ ಸಂಖ್ಯೆಗೆ ಅನುಗುಣವಾಗಿ ಅಗತ್ಯ ಮೂಲ ಸೌಕರ್ಯಗಳಿಲ್ಲ. ಆದ್ದರಿಂದ ಶ್ರೀ ಕ್ಷೇತ್ರವನ್ನು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು. ಹನೂರಿನಿಂದ ಮ.ಬೆಟ್ಟದವರೆಗೆ ಚತುಷ್ಪಥ ರಸ್ತೆ ನಿರ್ಮಿಸಬೇಕು. ಹನೂರು ತಾಲೂಕು ರಚನೆಯಾಗಿ 6 ವರ್ಷವೇ ಕಳೆದಿದೆ. ಆದರೆ ಇನ್ನೂ ಕೆಲವು ಕಚೇರಿಗಳು ಕೊಳ್ಳೇಗಾಲದಿಂದ ಹನೂರಿಗೆ ಸ್ಥಳಾಂತರವಾಗಿಲ್ಲ. ಹಾಗಾಗಿ ಸ್ಥಳಾಂತರವಾಗುವ ಕೆಲಸವಾಗಬೇಕು. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಕಚೇರಿಗಳಿಗೆ ಸ್ವಂತ ಕಟ್ಟಡ ನಿರ್ಮಾಣವಾಗಬೇಕು. ತಾಲೂಕು ಕೇಂದ್ರದಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು. ಪಟ್ಟಣ ಪಂಚಾಯಿತಿಯಲ್ಲಿ ಕಾಯಂ ಇಂಜಿನಿಯರ್ ನೇಮಕವಾಗಬೇಕು. ಸಿಬ್ಬಂದಿ ಕೊರತೆ ನಿವಾರಿಸಬೇಕು. ಇನ್ನು ತಾಲೂಕಿನಲ್ಲಿ ಬಹುತೇಕ ರಸ್ತೆಗಳು ಹಾಳಾಗಿದ್ದು, ವಾಹನ ಸವಾರರು ಸಂಚರಿಸಲು ಹರಸಾಹಸ ಪಡಬೇಕಿದೆ. ಹಾಗಾಗಿ ರಸ್ತೆಗಳು ಅಭಿವೃದ್ಧಿಯಾಗಬೇಕು. ಆದ್ದರಿಂದ ಜನವರಿ ತಿಂಗಳಲ್ಲಿ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಹನೂರು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಮನವಿ ಮಾಡಿದರು.
ಮನವಿಯನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು. ಸಮಿತಿ ಅಧ್ಯಕ್ಷ ಟಿ. ಸೋಮಶೇಖರ್, ಸಹ ಕಾರ್ಯದರ್ಶಿ ಹರೀಶ್‌ಕುಮಾರ್, ಖಜಾಂಚಿ ಸುದೇಶ್, ನಿರ್ದೇಶಕರಾದ ಗಿರೀಶ್, ಎಂ.ಬಸವರಾಜು ಹಾಗೂ ಬಸವರಾಜು ಇದ್ದರು.