- ಮಡಿಕೇರಿ : ಶನಿವಾರಸಂತೆ ಪಟ್ಟಣದ ತ್ಯಾಗರಾಜ ಕಾಲನಿಯಲ್ಲಿರುವ ಶ್ರೀ ವಿಜಯ ವಿನಾಯಕ ದೇವಸ್ಥಾನದ 9ನೇ ವಾರ್ಷಿಕೋತ್ಸವ ಭಾನುವಾರ ಶ್ರದ್ಧಾಭಕ್ತಿಯಿಂದ ನೆರವೇರಿತು. ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ದೇವಸ್ಥಾನದಲ್ಲಿ ಪೂಜಾ ಮಹೋತ್ಸವ ನಡೆಯಿತು. ಪ್ರಧಾನ ಅರ್ಚಕ ಮಂಜುನಾಥ ಶರ್ಮ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಿದವು.
-
- ಗಂಗಾಪೂಜೆ, ಪ್ರಾರ್ಥನೆ, ಕಲಶಪೂಜೆ, ಪಂಚಾಮೃತ ಅಭಿಷೇಕ ನಡೆಯಿತು, ಮಹಾಗಣಪತಿ ಹೋಮ ನೆರವೇರಿಸಿದ ಬಳಿಕ ಶ್ರೀ ವಿಜಯ ವಿನಾಯಕ ಸ್ವಾಮಿಗೆ 108 ಸಿಯಾಳಾಭಿಷೇಕ ನೆರವೇರಿಸಲಾಯಿತು. ಮಧ್ಯಾಹ್ನ 12 ಗಂಟೆಗೆ ದೇವಸ್ಥಾನದಲ್ಲಿ ಮಹಾಪೂಜೆ ನೆರವೇರಿಸಲಾಯಿತು. ಸಂಜೆ 5 ಗಂಟೆಗೆ ಶ್ರೀ ವಿಜಯ ವಿನಾಯಕ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು. ದೇವಸ್ಥಾನ ಸಮಿತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.