ಜಿಲ್ಲೆ

ದೇವರ ಮೇಲಿನ ವಿಶ್ವಾಸದಿಂದ ಸೇವೆ ಸಾರ್ಥಕ: ಪೇಜಾವರ ಶ್ರೀ

ಉಡುಪಿ: ದೇವರ ಮೇಲೆ ವಿಶ್ವಾಸವಿಟ್ಟು ಸೇವೆ ಮಾಡಿದರೆ ನಮ್ಮ ಕೆಲಸಗಳು ಸಾರ್ಥಕವಾಗುವುದರಲ್ಲಿ ಸಂಶಯವಿಲ್ಲ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.

ಬುಧವಾರ ಕುಕ್ಕಿಕಟ್ಟೆ ಬಾಲನಿಕೇತನ ವಾರ್ಷಿಕೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ವಿಶ್ವೇಶತೀರ್ಥ ಸೇವಾಧಾಮ ಮತ್ತು ಶ್ರೀಕೃಷ್ಣ ಸೇವಾಧಾಮ ಟ್ರಸ್ಟ್​ ವತಿಯಿಂದ ಸಂತೆಕಟ್ಟೆ ಕೃಷ್ಣಾನುಗ್ರಹ ಸಂಸ್ಥೆ ಮುಖ್ಯಸ್ಥ ಡಾ. ಉಮೇಶ್​ ಪ್ರಭು ಅವರಿಗೆ ಬಾಲ್ಯ ವಾತ್ಸಲ್ಯ ಸಿಂಧು ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಉಮೇಶ್​ ಪ್ರಭು, ಶಿಕ್ಷಣದ ಜತೆಗೆ ಮೌಲ್ಯ ಮತ್ತು ಸಂಸ್ಕಾರ ಕಲಿಸಿಕೊಡಬೇಕು. ಇದರಿಂದ ಸಮಾಜದಲ್ಲಿ ಅನಾಥಾಶ್ರಮ ಹಾಗೂ ವೃದ್ಧಾಶ್ರಮ ಸಂಖ್ಯೆ ಇಳಿಮುಖವಾಗುತ್ತದೆ ಎಂದು ಹೇಳಿದರು.

60ರ ಸಂಭ್ರಮದಲ್ಲಿರುವ ಪೇಜಾವರ ಸ್ವಾಮೀಜಿಯವರನ್ನು ಬಾಲನಿಕೇತನ ಟ್ರಸ್ಟ್​ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬಾಲನಿಕೇತನದಲ್ಲಿ 16 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಶಕುಂತಲಾ ಅವರಿಗೆ ಮನೆ ನಿರ್ಮಿಸಿಕೊಡುವ ಯೋಜನೆ ಪ್ರಕಟಿಸಲಾಯಿತು.

ಮಣಿಪಾಲ ಡಾಟ್​ ನೆಟ್​ ಸಿಇಒ ಡಾ. ನರಸಿಂಹ ಭಟ್​ ಉಪಸ್ಥಿತರಿದ್ದರು. ಬಿ. ಕೆ.ನಾರಾಯಣ್​ ಪ್ರಶಸ್ತಿ ಪುರಸ್ಕತರನ್ನು ಪರಿಚಯಿಸಿದರು. ಬಾಲನಿಕೇತನ ಆಡಳಿತ ಮಂಡಳಿ ಉಪಾಧ್ಯಕ್ಷ ಪ್ರೊ. ಕಮಲಾಕ್ಷ ಸ್ವಾಗತಿಸಿ, ಕಾರ್ಯದರ್ಶಿ ರಾಮಚಂದ್ರ ಉಪಾಧ್ಯ ಪ್ರಸ್ತಾವನೆಗೈದರು. ಗುರುರಾಜ್​ ಭಟ್​ ನಿರೂಪಿಸಿದರು. ಕೆ. ಸುಬ್ರಹ್ಮಣ್ಯ ಕಾರಂತ್​ ವಂದಿಸಿದರು.