ಮೈಸೂರು: ಶ್ರೀ ವ್ಯಾಸರಾಜ ತೀರ್ಥರು ಉತ್ಕೃಷ್ಟ ದೇವರ ನಾಮಗಳನ್ನು ಕನ್ನಡದಲ್ಲಿ ರಚನೆ ಮಾಡುವ ಮೂಲಕ ಶಾಸ್ತ್ರೀಯ ಸಂಗೀತಕ್ಕೆ ಕೊಡುಗೆ ನೀಡಿದ್ದಾರೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬಣ್ಣಿಸಿದರು.
ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀ ವ್ಯಾಸತೀರ್ಥವಿದ್ಯಾಪೀಠದ ಆವರಣದಲ್ಲಿ ಶ್ರೀ ವ್ಯಾಸರಾಜ ಮಠದ (ಸೋಸಲೆ)ದಿಂದ ಶುಕ್ರವಾರ ಆಯೋಜಿಸಿದ್ದ 1008 ಶ್ರೀ ವಿದ್ಯಾಶ್ರೀಶತೀರ್ಥ ಸ್ವಾಮೀಜಿ 9ನೇ ಪೀಠಾರೋಹಣ ವಾರ್ಷಿಕೋತ್ಸವ ಮತ್ತು ಶ್ರೀ ವ್ಯಾಸತೀರ್ಥ ವಿದ್ಯಾಪೀಠದ 10ನೇ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶ್ರೀ ವ್ಯಾಸರಾಜ ತೀರ್ಥರು ಉತ್ಕೃಷ್ಟ ದೇವರ ನಾಮಗಳ ಕನ್ನಡದಲ್ಲಿ ರಚನೆ ಮಾಡಿದ್ದಾರೆ. ಅಲ್ಲದೆ ಶಾಸ್ತ್ರೀಯ ಸಂಗೀತದಲ್ಲೂ ಪರಿಣತಿ ಹೊಂದಿದ್ದರು. ಅವರ ಕಾಲದ ಕರ್ನಾಟಕ ಸಂಗೀತ ವಿದ್ವಾಂಸರು ಶ್ರೀ ವ್ಯಾಸರಾಜ ತೀರ್ಥರ ಬಗ್ಗೆ ಉನ್ನತ ಅಭಿಪ್ರಾಯ ಹೊಂದಿದ್ದರು ಎಂದರು.
ಅಲ್ಲದೆ ಈಗಿನ ಶ್ರೀ ವಿದ್ಯಾಶ್ರೀಶ ತೀರ್ಥರು ತಮ್ಮ ಪೂರ್ವಾಶ್ರಮದಲ್ಲಿ ಬೆಂಗಳೂರು ಮತ್ತು ತಿರುಪತಿ ವಿವಿಗಳಲ್ಲಿ ಕುಲಪತಿಗಳಾಗಿ ಉತ್ತಮ ಕೆಲಸ ಮಾಡಿದ್ದು, ವ್ಯಾಸರಾಜ ಮಠದ ಪೀಠಾಧಿಪತಿಗಳಾದ ಮೇಲೆ ಅದರ ಹಿಂದಿನ ವೈಭವ ಮರುಕಳಿಸುವಲ್ಲಿ ಸಾಕಷ್ಟು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಸಕಲ ಶಾಸ್ತ್ರಗಳಲ್ಲಿ ಪರಿಣತಿ ಹೊಂದಿದ್ದ ಶ್ರೀ ವ್ಯಾಸರಾಜ ತೀರ್ಥರು ವಿದ್ವತ್ತಿನ ಗಣಿ ಎಂದರೆ ತಪ್ಪಾಗಲಾರದು. ಹಿಂದಿನ ಕಾಲದಲ್ಲಿ ಜನ ಸಾಮಾನ್ಯರ ಅಗತ್ಯಗಳನ್ನು ಪೂರೈಸಲು ಸಂತರು ರಾಜಮನೆತನದ ಪ್ರೋತ್ಸಾಹವನ್ನು ಬಳಸಿಕೊಂಡ ಅಸಂಖ್ಯಾತ ನಿದರ್ಶನಗಳಿವೆ. ಪ್ರತಿಯೊಂದು ಊರುಗಳಲ್ಲೂ ಕೆರೆ-ಕಟ್ಟೆ, ವಿಶ್ರಾಂತಿ ಸ್ಥಳಗಳನ್ನು ಕಟ್ಟಿಸುತ್ತಿದ್ದರು. ಎಲ್ಲ ವರ್ಗದ ಜನರನ್ನು ಒಟ್ಟುಗೂಡಿಸಿ ಆಧ್ಯಾತ್ಮವಾಗಿ ಒಂದುಗೂಡಿಸುತ್ತಿದ್ದರು. ಈ ನಿಟ್ಟಿನಲ್ಲಿ ಶ್ರೀ ವ್ಯಾಸರಾಜ ತೀರ್ಥರ ಕೊಡುಗೆ ಅಪಾರ ಎಂದರು.
ಶ್ರೀ ತಿರುಪತಿ ವಿವಿಯಲ್ಲಿ ಕುಲಪತಿಗಳಾಗಿದ್ದ ವೇಳೆ, ಹಿಂದಿನ ಪೇಜಾವರ ಶ್ರೀಗಳು ತಿರುಪತಿ ಸುತ್ತಮುತ್ತ ಅನ್ಯಧರ್ಮೀಯರ ಉಪಟಳದ ವಿರುದ್ಧ ಧ್ವನಿಯೆತ್ತಿದ್ಧಾಗ, ಶ್ರೀಗಳ ಹೋರಾಟಕ್ಕೆ ಒತ್ತಾಸೆಯಾಗಿ ನಿಂತಿದ್ದವರು ಎಂದು ನೆನೆದರು.
ನಿವೃತ್ತ ಐಎಎಸ್ ಅಧಿಕಾರಿ ಕೆ.ಜಯರಾಜ್ ಮಾತನಾಡಿ, ನಾನಾ ಕಾರಣಗಳಿಂದ ಶ್ರೀ ವ್ಯಾಸರಾಜ ಮಠದ ಘನತೆಗೆ ಚ್ಯುತಿ ಬರುವ ಘಟನೆಗಳು ಈ ಹಿಂದೆ ನಡೆದಿದ್ದವು. ಆ ಎಲ್ಲ ಸಂಕಷ್ಟಗಳಿಂದ ಶ್ರೀ ಮಠವು ತನ್ನ ಹಿಂದಿನ ವೈಭವಕ್ಕೆ ಮರಳುತ್ತಿದೆ. ಮಠದಲ್ಲಿ ಶ್ರೀ ವ್ಯಾಸರಾಜ ಕಾಲದ ವೈಭವ ಮರುಕಳಿಸಲು ಶ್ರೀ ವಿದ್ಯಾಶ್ರೀಶ ತೀರ್ಥರ ಕಾರ್ಯ ಶಾಘ್ಲನೀಯ ಎಂದರು.
ಡಿಆರ್‌ಡಿಒ ನಿವೃತ್ತ ವಿಜ್ಞಾನಿ ಪ್ರಹ್ಲಾದ್ ರಾಮರಾವ್, ಡಿಸಿಎಕ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಎಸ್.ರಾಘವೇಂಧ್ರ ರಾವ್, ಅಲ್ಫಾ ವಿನ್ಯಾಸ ತಂತ್ರಜ್ಞಾನ ಸಂಸ್ಥೆಯ ಸಿಇಒ ಎಚ್.ಎಸ್.ಹರಿಪ್ರಸಾದ್ ಇತರರು ಇದ್ದರು.