ಅಣ್ಣಿಗೇರಿ: ಪಟ್ಟಣ ಹಾಗೂ ತಾಲೂಕಿನ 70ಕ್ಕೂ ಹೆಚ್ಚು ರೈತರ 413 ಎಕರೆ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನೂರಾರು ವರ್ಷಗಳಿಂದ ಪಿತ್ರಾರ್ಜಿತವಾಗಿ ಬಂದ ಜಮೀನುಗಳ ಪಹಣಿಯ ಹಕ್ಕುಗಳ ಕಾಲಂನಲ್ಲಿ ವಕ್ಫ್ ಹೆಸರು ದಾಖಲಾಗಿದೆ. ಪಟ್ಟಣದ ರೈತ ಮಕ್ಸೂದಹುಸೇನ ಖಾಜಿ ಅವರಿಗೆ ಸಂಬಂಧಿಸಿದ ಜಂಟಿ ಖಾತೆ ಸರ್ವೇ ನಂ. 289/1ರ 9 ಎಕರೆ 9 ಗುಂಟೆ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದು ಆಗಿದೆ. ಇದರಿಂದ ರೈತ ಸಮೂಹ ಆತತಂಕಕ್ಕೆ ಒಳಗಾಗುವ ಪರಿಸ್ಥಿತಿ ಉದ್ಭವಿಸಿದೆ.
ಪಟ್ಟಣ ಹಾಗೂ ತಾಲೂಕಿನ ಸಣ್ಣ ಹಾಗೂ ಅತೀ ಸಣ್ಣ ರೈತರ ಜಮೀನಿನ ಪಹಣಿಯಲ್ಲಿ ಸರ್ಕಾರ ವಕ್ಫ್ ಆಸ್ತಿ ಅಂತ ದಾಖಲಿಸುವ ಮೂಲಕ ರೈತ ಕುಲಕ್ಕೆ ಅನ್ಯಾಯ ಎಸಗಲಾಗುತ್ತಿದೆ. ಕೂಡಲೇ ಸಂಬಂಧಿಸಿದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ರೈತರ ಆಸ್ತಿಗಳ ಪಹಣಿಯಲ್ಲಿ ವಕ್ಫ್ ಹೆಸರನ್ನು ತೆಗೆದು ಹಾಕಬೇಕು ಎಂದು ರೈತ ಬಸಪ್ಪ ಬಡಿಗೇರ ಒತ್ತಾಯಿಸಿದರು.
ತಾಲೂಕಿನ ಕೆಲ ರೈತರ ಪಹಣಿಯಲ್ಲಿ ವಕ್ಫ್ ಹೆಸರು ದಾಖಲಾಗಿರುವ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಮೇಲಧಿಕಾರಿಗಳ ನಿರ್ದೇಶನದ ಮೇರೆಗೆ ಮುಂದಿನ ಕ್ರಮ ಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡಲಾಗುವುದು.
ಮಂಜುನಾಥ ದಾಸಪ್ಪನವರ, ತಹಸೀಲ್ದಾರ್ ಅಣ್ಣಿಗೇರಿ
ಕೆಲ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಅಂತಾ ದಾಖಲಾಗಿರುವ ಮಾಹಿತಿ ನನಗೆ ಬಂದಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಹಾಗೂ ಸರ್ಕಾರದ ಗಮನಕ್ಕೆ ತಂದು ಸರಿಪಡಿಸಿಕೊಡುತ್ತೇನೆ. ರೈತರು ಆತಂಕಪಡುವ ಅಗತ್ಯವಿಲ್ಲ.
ಎನ್.ಎಚ್. ಕೋನರಡ್ಡಿ, ಶಾಸಕ ನವಲಗುಂದ