ಅಣ್ಣಿಗೇರಿ: ಮುಂಗಾರಿನ ಪ್ರಮುಖ ಬೆಳೆ ಹೆಸರು ಅತಿವೃಷ್ಟಿಯ ಹೊಡೆತದ ನಡುವೆಯೂ ಅಷ್ಟಿಷ್ಟು ರೈತರ ಕೈಸೇರಿದೆ. ಆದರೆ, ದರ ತೀವ್ರ ಕುಸಿದಿದ್ದು, ಕೈಗೆ ಬಂದ ದರಕ್ಕೆ ರೈತರು ಬೆಳೆ ಮಾರಾಟ ಮಾಡುವಂತಾಗಿದೆ.
ತಾಲೂಕಿನಲ್ಲಿ ಅಂದಾಜು 12 ಸಾವಿರ ಹೆಕ್ಟೇರ್ನಲ್ಲಿ ಹೆಸರು ಬೆಳೆಯಲಾಗಿದೆ. ಆರಂಭದಿಂದಲೂ ಬೆಳೆ ಉತ್ತಮವಾಗಿತ್ತು. ಇನ್ನೇನು ಕಟಾವು ಮಾಡುವ ಹಂತದಲ್ಲಿ ನಿರಂತರವಾಗಿ ಮಳೆ ಸುರಿಯಿತು. ಇದರ ಮಧ್ಯೆಯೂ ರೈತರು ಹರಸಾಹಸಪಟ್ಟು ಫಸಲು ಉಳಿಸಿಕೊಂಡು ಕಟಾವು ಮಾಡಿಸಿದ್ದಾರೆ. ಸದ್ಯ ರೈತರು ಬೆಳೆಯನ್ನು ಕಟಾವು ಮಾಡಿ, ಕಾಳು ಒಣಗಿಸುತ್ತಿದ್ದಾರೆ. ಒಣಗಿರುವ ಕಾಳು ಮಾರುಕಟ್ಟೆಗೆ ಬರುತ್ತಿದೆ. ಈ ಮಧ್ಯೆ ಬೆಳೆಯ ದರದಲ್ಲಿ ಭಾರಿ ಕುಸಿತವಾಗಿದೆ. ಫಸಲನ್ನು ಮಧ್ಯವರ್ತಿಗಳು ಕ್ವಿಂಟಾಲ್ಗೆ 6 ಸಾವಿರ ರೂ.ನಿಂದ 6,500 ರೂಪಾಯಿಗೆ ಖರೀದಿಸುತ್ತಿದ್ದಾರೆ.
ಕೇಂದ್ರ ಸರ್ಕಾರ ಹೆಸರು ಬೆಳೆಗೆ ಪ್ರತಿ ಕ್ವಿಂಟಾಲ್ಗೆ 8,682 ರೂಪಾಯಿ ದರ ನಿಗದಿಪಡಿಸಿದೆ. ಕೃಷಿ ಮಾರಾಟ ಇಲಾಖೆ, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಆದರೆ, ಈವರೆಗೆ ಹೆಸರು ಕಾಳು ಖರೀದಿ ಕೇಂದ್ರ ತೆರೆದಿಲ್ಲ. ಇದರಿಂದಾಗಿ ಮಧ್ಯವರ್ತಿಗಳು, ದಲ್ಲಾಳಿಗಳು ಮನಸೋ ಇಚ್ಛೆ ಹೆಸರು ಕಾಳಿಗೆ ದರ ನಿಗದಿ ಮಾಡುತ್ತಿದ್ದಾರೆ. ಇದರಿಂದಾಗಿ ಬೆಳೆಗೆ ಖರ್ಚು ಮಾಡಿರುವ ಹಣವು ರೈತರ ಕೈಗೆ ಸಿಗದಂತಾಗಿದೆ.
ಇನ್ನೊಂದೆಡೆ ಅತಿವೃಷ್ಟಿ ಉಂಟಾಗಿ ಬೆಳೆ ಹಾನಿಯಾಗಿದೆ. ತಾಲೂಕಿನಲ್ಲಿ 5,200 ರೈತರು ಹೆಸರು ಬೆಳೆಗೆ ವಿಮೆ ಕಂತು ಪಾವತಿಸಿದ್ದಾರೆ. ಪರಿಹಾರ ಕೋರಿ ಕೃಷಿ ಇಲಾಖೆ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಬೆಳೆ ವಿಮೆ ಕಂಪನಿಯವರು 4,850 ರೈತರಿಗೆ ಬೆಳೆ ವಿಮೆ ಕೊಡಬೇಕು. ಪ್ರತಿ ವರ್ಷ ಸರಾಸರಿ ಮಳೆ ಪ್ರಮಾಣ ಪರಿಗಣಿಸಿ ವಿಮೆ ಸೌಲಭ್ಯ ಕೊಡಬೇಕು ಎಂದು ರೈತ ಪರ ಸಂಘಟನೆಗಳು ಮತ್ತು ರೈತರು ಒತ್ತಾಯಿಸುತ್ತಿದ್ದಾರೆ.
ಹೆಸರು ಖರೀದಿ ಕೇಂದ್ರ ಆರಂಭವಾಗದ ಕುರಿತು ಈಗಾಗಲೇ ನನ್ನ ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಇಲಾಖೆ ಜತೆ ಮಾತನಾಡಿ, ಕೆಲವೇ ದಿನಗಳಲ್ಲಿ ಕೇಂದ್ರ ಪ್ರಾರಂಭ ಮಾಡಿಸಲು ಪ್ರಯತ್ನಿಸುತ್ತೇನೆ.| ಪ್ರಲ್ಹಾದ ಜೋಶಿ, ಕೇಂದ್ರ ಸಚಿವ ಈ ವರ್ಷ ಬೆಂಬಲ ಬೆಲೆನೂ ಇಲ್ಲ. ಹೆಸರು ಖರೀದಿ ಕೇಂದ್ರವೂ ಇಲ್ಲ. ರೈತರ ಬೆಳೆ ಬಂದಾಗ ಇಲ್ಲದ ಸವಲತ್ತು ಮತ್ತೆ ಯಾವಾಗ ಸಿಗುತ್ತದೆ. ಹೊರಗಿನ ವ್ಯಾಪಾರಿಗಳು ಕಡಿಮೆ ದರಕ್ಕೆ ಕಾಳು ಕೇಳುತ್ತಾರೆ. ಇದರಿಂದ ರೈತರಿಗೆ ನಷ್ಟವಾಗುತ್ತದೆ.| ರಾಜು ಯಣ್ಣಿ, ರೈತ ಅಣ್ಣಿಗೇರಿ ಬೆಂಬಲ ಬೆಲೆ ಯೋಜನೆಯಡಿ ಹೆಸರು ಕೇಂದ್ರ ತೆರೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಜತೆ ಮಾತನಾಡಿದ್ದೇನೆ. ಕೆಲವೇ ದಿನಗಳಲ್ಲಿ ಖರೀದಿ ಕೇಂದ್ರ ಆರಂಭವಾಗಲಿವೆ.| ಎನ್. ಎಚ್. ಕೋನರೆಡ್ಡಿ ಶಾಸಕ ಸರ್ಕಾರದ ಆದೇಶಕ್ಕೆ ಕಾಯುತ್ತಿದ್ದೇವೆ. ಆದೇಶ ಬಂದ ತಕ್ಷಣ ಹೆಸರು ಖರೀದಿ ಕೇಂದ್ರಗಳನ್ನು ಜಿಲ್ಲಾದ್ಯಂತ ಪ್ರಾರಂಭಿಸುತ್ತೇವೆ.| ವಿರೂಪಾಕ್ಷಪ್ಪ ಲಮಾಣಿ ಉಪನಿರ್ದೇಶಕ ಕೃಷಿ ಮಾರುಕಟ್ಟೆ ಇಲಾಖೆ ಧಾರವಾಡ