ಜಿಲ್ಲೆ

ತ್ಯಾಜ್ಯದಿಂದ ಮಲಿನಗೊಂಡ ಅಣ್ಣೆಕೆರೆ!

ಗಂಗಾಧರ ಬಿ ವಿ

* ಮೂಲ ಸ್ವರೂಪ ಕಳೆದುಕೊಂಡು ದುರ್ವಾಸನೆ

* ಸ್ವಚ್ಛತೆಗೆ ಅಧಿಕಾರಿಗಳು ಗಮನಹರಿಸಲಿ

ಚೇತನ್ ಚಕ್ಕೆರೆ ಬಿಡದಿ

ಮುದ್ದಾಪುರ ಕರೇನಹಳ್ಳಿಯ ಐತಿಹಾಸಿಕ ಕೆರೆ ನೀರು ದಿನದಿಂದ ದಿನಕ್ಕೆ ಮಲಿನಗೊಳ್ಳುತ್ತಿದ್ದು, ಕೆರೆ ದಡದಲ್ಲಿ ಹಾದು ಹೋಗುವಾಗ ದುರ್ವಾಸನೆ ಬರಲಾರಂಭಿಸಿದೆ.

ಹೌದು. ಅಣ್ಣೆಕೆರೆ ಮಲಿನವಾಗುತ್ತಿರುವ ಜತೆಗೆ ಮೂಲ ಸ್ವರೂಪ ಕಳೆದುಕೊಳ್ಳುತ್ತಿದೆ. ಇದರ ಜತೆಗೆ ಕೆರೆಯ ಸುತ್ತಮುತ್ತ ಜಾಗ ಅತಿಕ್ರಮಣವಾಗುತ್ತಿರುವ ಆರೋಪಗಳೂ ಇವೆ.

ಇದು ಸುಮಾರು 10 ಎಕರೆಗೂ ಹೆಚ್ಚು ವಿಸ್ತೀರ್ಣವಿದ್ದು, ಕೆರೆ ನೀರನ್ನು ವ್ಯವಸಾಯ ಸೇರಿ ಜನ ಜಾನುವಾರುಗಳ ಉಪಯೋಗಕ್ಕೆ ಬಳಸಲಾಗುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಕೆರೆಗೆ ನಿರುಪಯುಕ್ತ ವಸ್ತುಗಳನ್ನು ತಂದು ಹಾಕಲಾಗುತ್ತಿದೆ. ಇದರಿಂದಾಗಿ ನೀರು ಮಲಿನಗೊಳ್ಳಲು ಪ್ರಾರಂಭವಾಗಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಜನರು ಮನೆಗಳಲ್ಲಿನ ಹಳೇ ಬಟ್ಟೆಗಳು, ಗಾಜಿನ ಪೋಟೋ ತಂದು ದಡಕ್ಕೆ ಹಾಕುತ್ತಿದ್ದಾರೆ. ಮನೆಗಳಲ್ಲಿನ ಪೂಜೆಯ ತ್ಯಾಜ್ಯಸೇರಿ ಹಲವು ವಸ್ತುಗಳು ಕೆರೆಯೊಡಲು ಸೇರಿ ನೀರು ಗಬ್ಬುನಾರುತ್ತಿದೆ.

ಈ ಕೆರೆಗೆ ನಿರುಪಯುಕ್ತ ವಸ್ತುಗಳನ್ನು ತಂದು ಹಾಕುತ್ತಿರುವ ಪರಿಣಾಮ ಕೆರೆಯಲ್ಲಿನ ನೀರಿನ ಬಣ್ಣ ಹಸಿರಾಗಲು ಪ್ರಾರಂಭವಾಗಿದೆ. ಕೆರೆಯ ದಡದ ಕಡೆ ಸೊಳ್ಳೆ, ಕ್ರಿಮಿಗಳು ಹೆಚ್ಚಾಗಿವೆ. ಕೆಲವು ಕಡೆ ಮುಳ್ಳು ಗಂಟಿಗಳು ಬೆಳೆದು ನಿಂತಿವೆ. ಅವುಗಳನ್ನು ಕತ್ತರಿಸಿ ಶುಚಿತ್ವ ಕಾಪಾಡುವ ಕಡೆಗೆ ಯಾರೂ ಮುಂದಾಗಿಲ್ಲ.

ರೈತರಲ್ಲಿ ಆತಂಕ

ಕೆರೆಗಳು ಗ್ರಾಮಗಳ ಪ್ರಮುಖ ಜಲಸಂಪನ್ಮೂಲ. ತೋಟ, ಹೊಲ, ಗದ್ದೆಗಳಿಗೆ, ಜಾನುವಾರುಗಳಿಗೆ ಇದುವೇ ಜೀವಮೂಲ. ಕೆರೆ ಅಚ್ಚುಕಟ್ಟು ಪ್ರದೇಶವಿದ್ದು, ಕೆರೆ ನೀರನ್ನು ಆಶ್ರಯಿಸಿ ರೈತರು ಬೆಳೆ ಬೆಳೆಯುತ್ತಾರೆ. ಈಗ ಕೆರೆ ನೀರು ಮಲೀನವಾಗುತ್ತಿರುವ ಕಾರಣದಿಂದಾಗಿ ರೈತರಲ್ಲೂ ಆತಂಕ ಮನೆ ಮಾಡಿದೆ. ಇದಲ್ಲದೆ ಸಾಕಷ್ಟು ಜಾನುವಾರುಗಳು ಕೆರೆ ನೀರನ್ನು ಕುಡಿಯುತ್ತವೆ. ಹೀಗೆ ನೀರು ದಿನದಿಂದ ದಿನಕ್ಕೆ ಮಲಿನವಾಗುತ್ತಿದ್ದರೆ ಅವುಗಳ ಆರೋಗ್ಯದ ಮೇಲು ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.

ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ

ಈಗ ಬಿರು ಬೇಸಿಗೆ ಪ್ರಾರಂಭವಾಗುತ್ತಿದ್ದು, ಹನಿ ನೀರು ಅತ್ಯಮೂಲ್ಯವಾದದ್ದು. ಹಾಗಾಗಿ ಕೆರೆ ಉಳಿವಿಗಾಗಿ ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಬೇಕಿದೆ. ಸದ್ಯಕ್ಕೆ ಕೆರೆಯಲ್ಲಿರುವ ನೀರನ್ನು ಕೊಳಕಾಗದಂತೆ ನೋಡಿಕೊಳ್ಳಬೇಕಿದೆ. ಇದರ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಿ ಸ್ವಚ್ಛತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ.

ಅಣ್ಣಿಕೆರೆ ಬಹಳ ವರ್ಷಗಳಿಂದ ಜನ ಜಾನುವಾರುಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗವಾಗುತ್ತಲ್ಲೇ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ನೀರು ಮಲಿನವಾಗುತ್ತಿದೆ. ಅರಿವಿಲ್ಲದ ಜನರು ಹಲವು ವಸ್ತುಗಳನ್ನು ಕೆರೆಗೆ ಎಸೆಯುತ್ತಿದ್ದಾರೆ. ಇನ್ನಾದರೂ ಕೆರೆ ಉಳಿವಿಗಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕಿದೆ.ಸುರೇಶ್ಪರಿಸರಪ್ರೇಮಿ, ಕೆಂಚನಕುಪ್ಪೆ