ಜಿಲ್ಲೆ

ಅಣ್ಣನ ಮಗನಿಗೆ ಗುಂಡು ಹೊಡೆದು ಹತ್ಯೆ

ಹಲ್ಲೆಗೊಳಗಾದ ಸೋದರನೂ ಕೊನೆಯುಸಿರು ಪೊಲೀಸರ ವಶದಲ್ಲಿ ಆರೋಪಿ

  • ವಿಜಯವಾಣಿ ಸುದ್ದಿಜಾಲ ಗುಡಿಬಂಡೆ
    ನಮಾಜ್ ಮಾಡಲು ಹೋಗುತ್ತಿದ್ದ ಅಣ್ಣನ ಮಗನನ್ನು ಪಿಸ್ತೂಲ್‌ನಿಂದ ಶೂಟ್ ಮಾಡಿ ಹಾಗೂ ಅಣ್ಣನಿಗೂ ಮಚ್ಚಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಿರುವ ಘಟನೆ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ 5.20ರ ಸಮಯದಲ್ಲಿ ನಡೆದಿದೆ. ಘಟನೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
    ಹಂಪಸಂದ್ರ ಗ್ರಾಮದ ನಜೀರ್ ಅಹ್ಮದ್ (58) ಹಾಗೂ ಮೆಹಬೂಬ್ ಸಾಬ್ (80) ಮೃತಪಟ್ಟವರು. ಆರೋಪಿ ಬಷೀರ್ ಅಹ್ಮದ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
    ಆರೋಪಿ ಬಷೀರ್ ಅಹ್ಮದ್‌ಗೆ 4 ಮಂದಿ ಸೋದರರಿದ್ದಾರೆ. ಜಮೀನು ಸೇರಿ ಎಲ್ಲ ಆಸ್ತಿಗಳು ಸೋದರರ ನಡುವೆ ಸಮಾನವಾಗಿ ಭಾಗವಾಗಿದೆ. ಸೌದಿಯಲ್ಲಿ ಟೇಲರ್ ಕೆಲಸ ಮಾಡುತ್ತಿದ್ದ ಬಷೀರ್ ಅಹ್ಮದ್ 2 ವರ್ಷಗಳ ಹಿಂದೆ ಸ್ವಂತ ಗ್ರಾಮಕ್ಕೆ ಬಂದು ಏಕಾಂಗಿಯಾಗಿ ವಾಸಿಸುತ್ತಿದ್ದ. ಈತನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದು, ಸಂಸಾರದಲ್ಲಿ ಹೊಂದಾಣಿಕೆ ಇಲ್ಲದ ಕಾರಣ ವಿಚ್ಛೇದನ ಪಡೆದಿರುವ ಪತ್ನಿ ಮಕ್ಕಳೊಂದಿಗೆ ಬಾಗೇಪಲ್ಲಿಯಲ್ಲಿ ವಾಸಿಸುತ್ತಿದ್ದಾರೆ.
    ಬುಧವಾರ ಬೆಳಗಿನ ಜಾವ 5.20ರ ಸಮಯದಲ್ಲಿ ಅಣ್ಣ ಮೆಹಬೂಬ್ ಸಾಬ್ ಮಗ ನಜೀರ್ ಅಹ್ಮದ್ ಎಂದಿನಂತೆ ನಮಾಜ್ ಮಾಡಲು ಮಸೀದಿಗೆ ಹೋಗುವ ವೇಳೆ ಆರೋಪಿ ಮನೆ ಎದುರು ಹೋಗುತ್ತಿದ್ದಾಗ ಬಷೀರ್ ಅಹ್ಮದ್ ಬಳಿಯಿದ್ದ ಪಿಸ್ತೂಲ್‌ನಿಂದ ಏಕಾಏಕಿ ನಜೀರ್ ಅಹ್ಮದ್ ಮೇಲೆ ಗುಂಡು ಹಾರಿಸಿದ್ದಾನೆ. ಸ್ಥಳದಲ್ಲೇ ನಜೀರ್ ಅಹ್ಮದ್ ಮೃತಪಟ್ಟಿದ್ದಾನೆ. ಇದನ್ನು ನೋಡಿದ ಮೆಹಬೂಬ್ ಸಾಬ್ ಮಗನ ಬಳಿ ಬಂದಾಗ ಆತನ ಮೇಲೂ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಕಿರುಚಾಡುತ್ತಿರುವ ಸದ್ದು ಕೇಳಿ ಅಕ್ಕಪಕ್ಕದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
    ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡಿದ್ದ ಮೆಹಬೂಬ್ ಸಾಬ್ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ಚಿಕಿತ್ಸೆ ಲಿಸದೆ ಅವರೂ ಮೃತಪಟ್ಟಿದ್ದಾರೆೆ.

ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸಿ, ಡಿವೈಎಸ್‌ಪಿ ಶಿವಕುಮಾರ್, ಆರಕ್ಷಕ ವೃತ್ತ ನಿರೀಕ್ಷಕ ನಯಾಜ್ ಬೇಡ್, ಉಪನಿರೀಕ್ಷಕ ಗಣೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.


ಆರೋಪಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ. ನಂತರ ಇಡೀ ಪ್ರಕರಣದ ಬಗ್ಗೆ ನಿಖರ ಕಾರಣ ತಿಳಿಯಲಿದೆ. ಆರೋಪಿಗೆ ಪಿಸ್ತೂಲ್ ಎಲ್ಲಿಂದ ಬಂತು ಎಂಬ ಬಗ್ಗೆಯೂ ವಿಚಾರಣೆ ಮಾಡುತ್ತೇವೆ.
- ಕುಶಾಲ್ ಚೌಕ್ಸಿ, ಎಸ್‌ಪಿ, ಚಿಕ್ಕಬಳ್ಳಾಪುರ ಜಿಲ್ಲೆ