ಜಿಲ್ಲೆ

"ಅನ್ನಪೂರ್ಣ' ಯೋಜನೆಯಡಿ ಸ್ಮಾರ್ಟ್​ ಕಾರ್ಡ್​ ವಿತರಣೆ

ಪವನ್ ಆಚಾರ್ಯ ನೀರ್ಚಾಲು

ಬೆಂಗಳೂರು: ನಗರದ ಸ್ವಚ್ಛತೆ ಕಾಪಾಡುವಲ್ಲಿ ಜಲಮಂಡಳಿಯ ನೈರ್ಮಲ್ಯೀಕರಣ ಕಾಮಗಾರಿ ನಡೆಸುವ ಕಾರ್ಮಿಕರ ಪಾತ್ರ ಹಿರಿದಾದುದು. ಇವರ ಸೇವೆ ಹಾಗೂ ತ್ಯಾಗವನ್ನು ಗೌರವಿಸುವ ನಿಟ್ಟಿನಲ್ಲಿ "ಅನ್ನಪೂರ್ಣ ಯೋಜನೆ' ಅನುಷ್ಠಾನಗೊಳಿಸಿದೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್​ ಹೇಳಿದ್ದಾರೆ.

ಜಲಮಂಡಳಿಯ ರಜತ ಭವನದಲ್ಲಿ ಜಲಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ "ಅನ್ನಪೂರ್ಣ' ಯೋಜನೆಯಡಿ ಸ್ಮಾರ್ಟ್​ ಕಾರ್ಡ್​ಗಳನ್ನು ವಿತರಿಸಿ ಮಾತನಾಡಿದರು.

ಈ ಯೋಜನೆಯಡಿ 700ಕ್ಕೂ ಹೆಚ್ಚು ಕಾರ್ಮಿಕರಿಗೆ ಪ್ರತಿತಿಂಗಳು 1,500 ರೂ.ಗಳನ್ನು ಅವರ ಖಾತೆಗೆ ವರ್ಗಾವಣೆ ಆಗಲಿದೆ. ಗುಣಮಟ್ಟದ ಉಪಾಹಾರವನ್ನು ಖಚಿತಪಡಿಸುವ ಜತೆಗೆ ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ಗೌರವವನ್ನೂ ನೀಡಲಿದೆ. ಜಲಮಂಡಳಿಗೆ ದೊಡ್ಡ ಇತಿಹಾಸವಿದೆ. ಜನಸಾಮಾನ್ಯರ ಸೇವೆಯಲ್ಲಿ ತೊಡಗಿರುವ ಈ ಸಂಸ್ಥೆ ಮಾನವ ಸೇವೆಯ ಪ್ರತಿಕವಾಗಿದೆ ಎಂದರು.

ಜಲಮಂಡಳಿ ಅಧ್ಯಕ್ಷ ಡಾ. ರಾಮ್​ ಪ್ರಸಾತ್​ ಮನೋಹರ್​ ಅವರು ಈ ಯೋಜನೆಯ ತಾಂತ್ರಿಕ ಅಂಶಗಳನ್ನು ವಿವರಿಸಿದರು. ಮುಖ್ಯ ಆಡಳಿತಾಧಿಕಾರಿ ಹಾಗೂ ಕಾರ್ಯದರ್ಶಿ ಮದನ್​ ಮೋಹನ್​, ಪ್ರಧಾನ ಮುಖ್ಯ ಇಂಜಿನಿಯರ್​ ಬಿ.ಎಸ್​. ದಲಾಯತ್​, ಮುಖ್ಯ ಇಂಜಿನಿಯರ್​ಗಳಾದ ಎಸ್​.ವಿ. ವೆಂಕಟೇಶ, ರಾಜೀವ್​, ದೇವರಾಜ್​, ಜಯಶಂಕರ್​, ಪರಮೇಶ್​, ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರ ಸುಬ್ಬರಾಮಯ್ಯ, ಜಲಮಂಡಳಿ ನೌಕರ ಸಂಘದ ಅಧ್ಯಕ್ಷ ಗೋವಿಂದರಾಜು, ಸ್ಯಾನಿಟರಿ ವರ್ಕರ್ಸ್​ ಅಸೋಸಿಯೇಷನ್​ ಅಧ್ಯಕ್ಷ ಸಿದ್ದಪ್ಪ ಉಪಸ್ಥಿತರಿದ್ದರು.