ಬಳ್ಳಾರಿ : ಮಹಿಳಾ ಜನಪ್ರತಿನಿಧಿಗಳೇ ನಿರಾಳವಾಗಿರುವ ಅವಿಭಿಜಿತ ಗಣಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎರಡು ದಶಕಗಳ ಬಳಿಕ ಹಾಗೂ ಮೊದಲ ಬಾರಿಗೆ ಸಂಡೂರು ಕ್ಷೇತ್ರಕ್ಕೆ ಮಹಿಳಾ ಜನಪ್ರತಿನಿಧಿಯಾಗಿ ಈ.ಅನ್ನಪೂರ್ಣ ತುಕಾರಾಮ್ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.
ರಾಜ್ಯದಲ್ಲಿ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಒಂದಾದ ಸಂಡೂರು ಕ್ಷೇತ್ರ ತೀವ್ರ ಕುತೂಹಲ ಮೂಡಿಸಿತ್ತು. ಯಾರ ಕೈ ಮೇಲಾಗುತ್ತೆ ಎಂಬ ಚರ್ಚೆಗಳು ಸಹ ಜೋರಾಗಿ ನಡೆದಿತ್ತು. ಸಂಡೂರು ಕ್ಷೇತ್ರ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷ ಭದ್ರಕೋಟೆಯಾಗಿ ಬಿಂಬಿಸಿಕೊಂಡಿದೆ. ಆದರೆ, ಈ ಕ್ಷೇತ್ರದಲ್ಲಿ ತನ್ನ ಮಡಿಲಲ್ಲಿ ಪ್ರಕೃತಿಯ ಸೌಂದರ್ಯ, ಗುಣಮಟ್ಟದ ಅದಿರು, ನಾರಿಹಳ್ಳ ಜಲಾಶಯವಿದ್ದು, ಒಂದು ಬಾರಿಯೂ ಮಹಿಳೆಯರಿಗೆ ಅವಕಾಶ ನೀಡಿಲ್ಲ ಎಂಬ ಕೂಗು ಕೇಳಿ ಬರುತ್ತಿತ್ತು. ಸದ್ಯ ಈ ಉಪ ಚುನಾವಣೆಯಲ್ಲಿ ಸಂಸದ ಈ.ತುಕಾರಾಮ್ ಪತ್ನಿ ಅನ್ನಪೂರ್ಣ ಅಭೂತಪೂರ್ವವಾಗಿ ಜಯಿಸುವ ಮೂಲಕ ಅವಕಾಶ ನೀಡಿಲ್ಲ ಎಂಬ ಕೊರಗು ಕೂಡ ನಿವಾರಿದೆ.
ಅವಳಿ ಜಿಲ್ಲೆಯ ಐದನೇ ಶಾಸಕಿ : ಅವಿಭಿಜಿತ ಜಿಲ್ಲೆಯಲ್ಲಿ ಈವರೆಗೂ ಮಹಿಳಾ ಪ್ರತಿನಿಧಿಗಳಾಗಿ ಅನ್ನಪೂರ್ಣ ಸೇರಿ ಒಟ್ಟು ಐವರು ಆಯ್ಕೆಯಾಗಿದ್ದಾರೆ. ಮೊದಲ ಬಾರಿಗೆ 1957ರಲ್ಲಿ ಕುರುಗೋಡುದಿಂದ ಅಲ್ಲಂ ಸುಮಂಗಳಮ್ಮ, 1962ರಲ್ಲಿ ಹೊಸಪೇಟೆಯಿಂದ ಮುರಾರಿ ಎಂ. ಕಮಲ ಶ್ರೀರಾಮುಲು, 1998 ಉಪಚುನಾವಣೆ, 1999, 2004 ರಲ್ಲಿ ಕೊಟ್ಟೂರು ಕ್ಷೇತ್ರದಿಂದ ಭಾಗೀರಥ ಟಿ. ಮರುಳು ಸಿದ್ದನಗೌಡ, 1999ರಲ್ಲಿ ಹೊಸಪೇಟೆಯಿಂದ ಜಯಲಕ್ಷ್ಮೀ ಗುಜ್ವಾಲ್, 2024ರ ಉಪ ಚುನಾವಣೆಯಲ್ಲಿ ಸಂಡೂರಿನಿಂದ ಈ. ಅನ್ನಪೂರ್ಣ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಇದರಲ್ಲಿ ವಿಶೇಷವಾಗಿ ಮುರಾರಿ ಎಂ. ಶ್ರೀರಾಮುಲು (ಪಿಎಸ್‌ಪಿ) ಪಕ್ಷದಿಂದ ಆಯ್ಕೆಯಾಗಿದ್ದು ಬಿಟ್ಟರೆ ಉಳಿದೆಲ್ಲ ಎಲ್ಲರೂ ಕಾಂಗ್ರೆಸ್‌ಪಕ್ಷದಿಂದ ಆಯ್ಕೆಯಾಗಿದ್ದಾರೆ. ಜಿಲ್ಲೆಯಲ್ಲಿ ಮಹಿಳೆಯರಿಗೆ ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಅವಕಾಶ ನೀಡಿರುವುದು ಅಂಶಗಳಲ್ಲಿ ತಿಳಿದಿದೆ. ಇಬ್ಬರು ಮಹಿಳಾ ಅಭ್ಯರ್ಥಿಗಳಾದ ಭಾಗಿರಥ ಟಿ. ಮರುಳು ಸಿದ್ದನಗೌಡ, ಅನ್ನಪೂರ್ಣ ಅವರು ಮೊದಲ ಬಾರಿಗೆ ಉಪ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದಾರೆ. ಅಲ್ಲದೆ, ಸರ್ಕಾರದಿಂದನೇ ನಾಮನಿರ್ದೇಶಿತರಾಗಿ ಒಬ್ಬ ಶಾಸಕರನ್ನು ಆಯ್ಕೆ ಮಾಡುತ್ತಿದ್ದರು. ಆದ್ದರಿಂದ, 1952 ರಿಂದ 1957 ಮೊದಲ ಬಾರಿಗೆ ಕುರುಗೋಡುನಿಂದ ಅಲ್ಲಂ ಸುಮಂಗಳಮ್ಮ ಅವರನ್ನು ನಾಮ ನಿರ್ದೇಶಿತ ಶಾಸಕಿಯಾಗಿ ನೇಮಕ ಮಾಡಲಾಗಿತ್ತು.
ಮೂವರು ಸಂಸದೆಯರು : ಅವಳಿ ಜಿಲ್ಲೆಯಲ್ಲಿ ಕೇವಲ ಶಾಸಕಿರಾಗಿ ಆಯ್ಕೆಯಾಗುವುದಲ್ಲದೆ ಮೂವರು ಮಹಿಳಾ ಸಂಸದರು ಜಿಲ್ಲೆಯಿಂದ ಗೆಲವು ಸಾಧಿಸಿ ಜಿಲ್ಲೆಯ ಪ್ರತಿನಿಧಿಯಾಗಿ ದೆಹಲಿಯ ಸಂಸತ್ ಪ್ರವೇಶಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಬಸವರಾಜೇಶ್ವರಿ 1984, 1989, 1991 ಸತತ ಮೂರು ಬಾರಿ ಹ್ಯಾಟ್ರಿಕ್ ಜಯಸಿದ್ದಲ್ಲದೆ ಹಾಗೂ ಕಲ್ಯಾಣ ಕರ್ನಾಟಕದಿಂದ ಮೊದಲ ಮಹಿಳಾ ಸಂಸದರಾಗಿ ಆಯ್ಕೆಯಾಗಿ ಮೂಲಕ ಇತಿಹಾಸ ಸೃಷ್ಟಿಸಿದ್ದರು. 1999 ರಲ್ಲಿ ದೇಶವೇ ಗಣಿ ಜಿಲ್ಲೆಯತ್ತ ತಿರುಗಿ ನೋಡುವಂತೆ ಮಾಡಿದ್ದ ಚುನಾವಣೆಯಾಗಿತ್ತು. ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ, ಬಿಜೆಪಿ ನಾಯಕಿ ಸುಷ್ಮಾ ಸರೋಜ ಜಿಲ್ಲೆಯಿಂದ ಸ್ಪರ್ಧಿಸಿದ್ದರು. ತೀವ್ರ ಜಿದ್ದಾಜಿದ್ದಾಯಿಂದ ಕೂಡಿದ್ದ ಈ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಜಯಿಸಿ ಬಳ್ಳಾರಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿ ನಿರ್ಮಿಸಿದ್ದರು. ಕ್ಷೇತ್ರ ಮರುವಿಂಗಡೆಯಾದ ಬಳಿಕ ಜಿಲ್ಲೆ ಎಸ್ಟಿ ಮೀಸಲು ಕ್ಷೇತ್ರವಾಯಿತು. 2009ರಲ್ಲಿ ಬಿಜೆಪಿಯಿಂದ ಮಾಜಿ ಸಚಿವ ಬಿ. ಶ್ರೀರಾಮುಲು ಸಹೋದರಿ ಜೆ. ಶಾಂತಾ ಸ್ಪರ್ಧಿಸಿ ರೆಡ್ಡಿ ಸಹೋದರರ ಬಲದಿಂದ ಕಾಂಗ್ರೆಸ್ ಅರ್ಭ್ಯರ್ಥಿಯಿಂದ ಬಹಳ ಅಂತರದಿಂದ ಗೆದ್ದರು. ಎರಡು ಬಾರಿ ಕಾಂಗ್ರೆಸ್ ಪಕ್ಷದ ನಾಯಕಿಯರು ಸಂಸತ್ ಪ್ರವೇಶಿಸಿದರೆ, ಒಂದು ಬಾರಿ ಬಿಜೆಪಿ ಗೆಲವು ಸಾಧಿಸಿದೆ.