ಹನೂರು: ತಾಲೂಕಿನ ಹೂಗ್ಯಂ ವನ್ಯಜೀವಿ ವಲಯದ ಮಿಣ್ಯಂ ಶಾಖೆಯ ನಕ್ಕುಂದಿ ಗಸ್ತಿನ ಅಣ್ಣಮ್ಮಿಕೋಬೆ ಅರಣ್ಯ ಪ್ರದೇಶಕ್ಕೆ ಬುಧವಾರ ಬೆಂಕಿ ತಗುಲಿ 20ಕ್ಕೂ ಹೆಚ್ಚು ಎಕರೆ ಪ್ರದೇಶ ಆಹುತಿಯಾಗಿದೆ.
ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಅಣ್ಣಮ್ಮಿಕೋಬೆ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಗಸ್ತಿನಲ್ಲಿ ಸಿಬ್ಬಂದಿ ಗಮನಕ್ಕೆ ಬಂದಿದೆ. ಕೂಡಲೇ ಸಿಬ್ಬಂದಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಬೆಂಕಿ ನಂದಿಸಲು ಮುಂದಾದರು. ಆದರೆ ಬೆಂಕಿ ಜ್ವಾಲೆ ತೀವ್ರವಾದ ಹಿನ್ನೆಲೆಯಲ್ಲಿ ಆರ್‌ಎಫ್‌ಒ ಮಾದೇಶ ನೇತೃತ್ವದ ಸಿಬ್ಬಂದಿ ತಂಡ ಸ್ಥಳಕ್ಕಾಗಮಿಸಿ ತಡರಾತ್ರಿವರೆಗೂ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದರು. 20 ಎಕರೆ ಪ್ರದೇಶ ಬೆಂಕಿಗೆ ಆಹುತಿಯಾಗಿದ್ದು, ಮರ ಗಿಡಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಶವಾಗಿದೆ ಎಂದು ತಿಳಿದು ಬಂದಿದೆ.