ವಿಜಯವಾಣಿ ಸುದ್ದಿಜಾಲ ಉಡುಪಿ
ದೇಶವಷ್ಟೇ ಅಲ್ಲದೆ, ಜಗದಾದ್ಯಂತ ಸನಾತನ ಧರ್ಮ ಹಾಗೂ ಭಗವದ್ಗೀತೆ ಪ್ರಸಾರ ಮಾಡುತ್ತಿರುವ ಪುತ್ತಿಗೆ ಮಠದ ಸುಗುಣೇಂದ್ರ ಶ್ರೀಗಳ ಕಾರ್ಯ ಅನನ್ಯ. ಇತ್ತೀಚೆಗೆ ಉಡುಪಿಗೆ ಭೇಟಿ ನೀಡಿದ್ದಾಗ ಶ್ರೀಗಳಿಂದ ಆಶೀರ್ವಾದ ಪಡೆದಿದ್ದೆ. ಇದೀಗ ಅಮೆರಿಕದಲ್ಲಿ ಅವರು ಸ್ಥಾಪಿಸಿರುವ ದೇಗುಲ ಕಂಡು ಅಚ್ಚರಿ ಹಾಗೂ ನೆಮ್ಮದಿಯ ಭಾವ ಮೂಡಿದೆ ಎಂದು ಬಿಜೆಪಿ ನಾಯಕ ಅಣ್ಣಾಮಲೈ ಶ್ಲಾಘಿಸಿದ್ದಾರೆ.
ಅಣ್ಣಾಮಲೈ ಅವರು ಅಮೆರಿಕದ ಪುತ್ತಿಗೆ ದೇಗುಲಕ್ಕೆ ಬಂದ ವಿಚಾರ ತಿಳಿದ ನೂರಾರು ಭಾರತೀಯರು, ಕನ್ನಡಿಗರು ದಾಂಗುಡಿ ಇಟ್ಟಿದ್ದರು. ಅವರೆಲ್ಲರೂ ಅಣ್ಣಾಮಲೈ ಕಂಡು ಕೆಲ ನಿಮಿಷ ಭಾರತ ಮಾತಾ ಕೀ ಜೈ, ವಂದೇ ಮಾತರಂ, ಜೈ ಮೋದೀಜಿ ಎಂದು ಘೋಷಣೆ ಕೂಗಿದರು. ಎಲ್ಲರೊಂದಿಗೆ ಫೋಟೋ ತೆಗೆಸಿಕೊಂಡು ಅಣ್ಣಾಮಲೈ ಖುಷಿಪಟ್ಟರು.
ದೇವಾಲಯದ ಪ್ರಧಾನ ಅರ್ಚಕ ಕಿರಣ ರಾವ್ ಸ್ವಾಗತಿಸಿ, ದೇವರ ಪ್ರಸಾದ ನೀಡಿದರು. ಸಹ ಅರ್ಚಕರಾದ ಮಂಜುನಾಥ ಭಟ್, ರಾಘವೇಂದ್ರ ಭಟ್, ಗುಂಡು ರಾವ್, ಕಾರ್ಯಕರ್ತರಾದ ಶ್ರೀಧರ , ರವಿ ರಾವ್, ರಂಗನಾಥ ಇತರರು ಸಹಕರಿಸಿದರು.
ಕಾಶ್ಮೀರ ಘಟನೆಯ ಹಿನ್ನೆಲೆಯಲ್ಲಿ ಭಾರತ ದೇಶಕ್ಕೆ ರಕ್ಷಣೆ ನೀಡುವಂತೆ ಅಣ್ಣಾಮಲೈ ವಿಶೇಷ ಪೂಜೆ ಸಲ್ಲಿಸಿದರು. ಮೊದಲಿಗೆ ಆಶ್ಲೇಷಾ ನಕ್ಷತ್ರ, ಕರ್ಕಾಟಕ ರಾಶಿಯ ಅಣ್ಣಾಮಲೈ ಹೆಸರಲ್ಲಿ, ಅನುರಾಧಾ ನಕ್ಷತ್ರ, ವೃಶ್ಚಿಕ ರಾಶಿಯ ನರೇಂದ್ರ ಮೋದಿ, ಭರಣಿ ನಕ್ಷತ್ರ, ಮೇಷ ರಾಶಿಯ ಅಮಿತ್ ಷಾ ಹೆಸರಿನಲ್ಲಿ ಹಾಗೂ ದೇಶದ ಎಲ್ಲ ಜನರಿಗೆ ಕ್ಷೇಮ-ಧೈರ್ಯ ದಯಪಾಲಿಸು ಎಂದು ಅರ್ಚಕರಲ್ಲಿ ಸಂಕಲ್ಪ ಹಾಗೂ ಮಹಾಮಂಗಳರಾತಿ ಮಾಡಿಸಿ, ಪ್ರಸಾದ ಸ್ವೀಕರಿಸಿದರು.