ಮಡಿಕೇರಿ:
ಭಾರತದ ಧೀಮಂತ ಸೇನಾಧಿಕಾರಿಯಾಗಿದ್ದ ಜನರಲ್ ತಿಮ್ಮಯ್ಯ ಅವರ ಸೇನಾ ಜೀವನ ಪ್ರತೀಯೋರ್ವ ಯುವಕ, ಯುವತಿಯರಿಗೂ ಆದರ್ಶಪ್ರಾಯ. ನಮಗೆ ಎಲ್ಲವನ್ನೂ ನೀಡಿದ ಭಾರತಕ್ಕೆ ನಾವು ಮಹತ್ವದ್ದೇನನ್ನಾದರೂ ನೀಡಬೇಕೆಂಬ ನಿಲುವನ್ನು ತಿಮ್ಮಯ್ಯ ಅವರ ಜೀವನದ ಮಾಹಿತಿ ಪಡೆದ ಎಲ್ಲರೂ ಹೊಂದಬೇಕೆಂದು ತಮಿಳುನಾಡು ಬಿಜೆಪಿ ಅಧ್ಯಕ್ಷ, ಮಾಜಿ ಪೊಲೀಸ್ ಅಧಿಕಾರಿ ಕೆ.ಅಣ್ಣ್ಣಾಮಲೈ ಹೇಳಿದರು.
ಪತ್ನಿ ಅಖಿಲಾ ಸ್ವಾಮಿನಾಥನ್, ಪುತ್ರ ಅರ್ಜುನ್, ಪುತ್ರಿ ಆರಾಧನ ಅವರೊಂದಿಗೆ ಬುಧವಾರ ತಿಮ್ಮಯ್ಯ ಸ್ಮಾರಕ ಭವನಕ್ಕೆ ಭೇಟಿ ನೀಡಿದ ಅಣ್ಣ್ಣಾಮಲೈ, ಫೀಲ್ಡ್ ಮಾರ್ಷಲ್ ಕೆಎಂ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ ಸಂಚಾಲಕ ನಿವೃತ್ತ ಮೇಜರ್ ಬಿದ್ದಂಡ ನಂದ ಅವರಿಂದ ತಿಮ್ಮಯ್ಯ ಅವರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು.
ಈ ಸಂದರ್ಭ ಪ್ರತಿಕ್ರಿಯಿಸಿದ ಅಣ್ಣಾಮಲೈ, ಭಾರತದ ಅಪ್ರತಿಮ ಸೇನಾನಿ ಜನರಲ್ ತಿಮ್ಮಯ್ಯ ಕೊಡಗಿನವರು ಎಂಬುದೇ ಕೊಡಗಿಗೆ ಪ್ರತಿಷ್ಟೆಯ ವಿಚಾರವಾಗಿದೆ. ಇಂಥ ಧೀರಸೇನಾನಿಯನ್ನು ಹೊಂದಿದ್ದ ಕೊಡಗಿನ ಪವಿತ್ರ ಭೂಮಿ ಧನ್ಯವಾಗಿದೆ. ತಿಮ್ಮಯ್ಯ ಸ್ಮರಣಾರ್ಥ ಸ್ಮಾರಕ ಭವನ ಹೊಂದುವ ಮೂಲಕ ಅವರ ಜೀವನ ಮತ್ತು ಸೇನಾ ಸಾಧನೆಯನ್ನು ವಿಶ್ವಕ್ಕೇ ತಿಳಿಸುವ ಕೆಲಸವಾಗಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಶ್ಲಾಘಿಸಿದರು. ಇಂಥ ವೀರನ ಸ್ಮಾರಕ ಭವನಕ್ಕೆ ಭೇಟಿ ನೀಡಿರುವುದು ತನ್ನಲ್ಲಿ ಧನ್ಯತೆ ಮೂಡಿಸಿದೆ ಎಂದೂ ಅಭಿಪ್ರಾಯ ಪಟ್ಟರು.
ಜನರಲ್ ತಿಮ್ಮಯ್ಯ ಅವರ ಸಾಹಸಗಾಥೆ ಕೇಳಿ ಭಾವಪರವಶರಾದ ಅಣ್ಣಾಮಲೈ, ತಿಮ್ಮಯ್ಯ ಭಾವಚಿತ್ರಕ್ಕೆ ನಮಸ್ಕರಿಸುತ್ತಿದ್ದದ್ದು ಗಮನಾರ್ಹವಾಗಿತ್ತು. ಈ ಸಂದರ್ಭ ತಿಮ್ಮಯ್ಯ ಸ್ಮಾರಕ ಭವನದ ವ್ಯವಸ್ಥಾಪಕ ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ ಹಾಜರಿದ್ದರು. ರಾಜಕೀಯದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅಣ್ಣಾಮಲೈ ಇದು ರಾಜಕೀಯ ಮಾತಿಗೆ ಸಮಯ ಸಂದರ್ಭವಲ್ಲ. ತಾನು ಎರಡು ದಿನಗಳ ಕಾಲ ಕುಟುಂಬದೊಂದಿಗೆ ಕೊಡಗಿನಲ್ಲಿ ಪ್ರವಾಸ ಮಾಡುತ್ತಿರುವುದಾಗಿ ಹೇಳಿದರು.