ಮಳವಳ್ಳಿ: ವಿಧಾನಸಭೆ ಅಧಿವೇಶನದ ಸದನದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಅಸಂವಿಧಾನಿಕ ಪದ ಬಳಕೆ ಮಾಡಿರುವ ಶಾಸಕ ಪಿ.ಎಂ.ನರೇಂದ್ರಸ್ವಾಮಿ ನಡೆಯನ್ನು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಖಂಡಿಸಿದರು.
ರಾಜ್ಯ ಸರ್ಕಾರದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಜನಪರ ಆಡಳಿತ ನೀಡಿ ಜನಮನ್ನಣೆ ಪಡೆದಿರುವ ಎಚ್.ಡಿ ಕುಮಾರಸ್ವಾಮಿ ಅವರನ್ನು ಸದನದಲ್ಲಿ ಇಲ್ಲಿನ ಶಾಸಕರು ಯೋಗ್ಯತೆ ಬಗ್ಗೆ ವೀರಾವೇಶದಲ್ಲಿ ಹೇಳಿದ್ದು, ನಿಮ್ಮ ಯೋಗ್ಯತೆ ಏನೆಂಬುದನ್ನು ಮೊದಲು ನೀವು ಅವಲೋಕನ ಮಾಡಿಕೊಳ್ಳಿ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಐದು ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಗೆಲುವು ಕಂಡಿದೆ ಹೊರತು, ನಿಮ್ಮ ನಡವಳಿಕೆಯಿಂದಲ್ಲ. ಕೂಡಲೇ ಮಾಜಿ ಸಿಎಂ ವಿರುದ್ಧ ಹೇಳಿಕೆ ಬಗ್ಗೆ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ. 46 ಸಾವಿರ ಮತಗಳ ಅಂತರದ ಗೆಲುವು ನಿಮ್ಮ ತಲೆ ತಿರುಗುವಂತೆ ಮಾಡಿದೆ. ಜೆಡಿಎಸ್ ಕೇವಲ 19 ಸ್ಥಾನ ಗೆದ್ದಿರುವುದನ್ನು ಗೇಲಿ ಮಾಡಿರುವ ನೀವು, ಕಾಂಗ್ರೆಸ್ ಕಳೆದ ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವ ಸ್ಥಾನಗಳು ಎಷ್ಟು ಎಂದು ಒಮ್ಮೆ ಹಿಂತಿರುಗಿ ಇತಿಹಾಸವನ್ನು ನೋಡಿ ಎಂದರು.
ಈ ಹಿಂದೆ ಕುಮಾರಸ್ವಾಮಿ ಅವರು ಮಂಡಿಸಿದ್ದ ಬಜೆಟ್ ಅನ್ನು ಮಂಡ್ಯ ಜಿಲ್ಲೆಯ ಬಜೆಟ್ ಎಂದು ಕಾಂಗ್ರೆಸ್‌ನವರು ಟೀಕಿಸಿದ್ದರು. ಅಷ್ಟರ ಮಟ್ಟಿಗೆ ಜಿಲ್ಲೆಗೆ ಅನುದಾನ ಘೋಷಿಸಿದ್ದರು. ಆದರೆ ಜಿಲ್ಲೆಯಿಂದ ಆರು ಶಾಸಕರು ಕಾಂಗ್ರೆಸ್‌ನಿಂದ ಚುನಾಯಿತರಾಗಿದ್ದರೂ ಬಜೆಟ್‌ನಲ್ಲಿ ಜಿಲ್ಲೆಗೆ ಯಾವುದೇ ವಿಶೇಷ ಅನುದಾನ, ಯೋಜನೆ ನೀಡಿಲ್ಲ. ನಿಮ್ಮ ಪಕ್ಷದ ಮೇಲೆ ನಂಬಿಕೆ ಇಟ್ಟು ಮತ ನೀಡಿದ ಜಿಲ್ಲೆಯ ಜನರಿಗೆ ಕಾಂಗ್ರೆಸ್ ಸರ್ಕಾರದ ಕೊಡುಗೆ ಏನೆಂದು ಪ್ರಶ್ನಿಸಿದರು.
ಜೆಡಿಎಸ್ ಹಿಂದುಳಿದ ವರ್ಗದ ಅಧ್ಯಕ್ಷ ಡಿ.ಜಯರಾಮು, ಜಿಲ್ಲಾ ಯುವ ಘಟಕದ ಅಧ್ಯಕ್ಷ ರವಿ, ತಾಲೂಕು ಅಧ್ಯಕ್ಷ ವಿಶ್ವನಾಥ್, ಪುರಸಭೆ ಸದಸ್ಯರಾದ ಪ್ರಶಾಂತ್, ನಾಗೇಶ್, ಮುಖಂಡರಾದ ಪುಟ್ಟಬುದ್ಧಿ, ಪ್ರಭು, ಪೊತ್ತಂಡೆ ನಾಗರಾಜು, ಮಲ್ಲೇಗೌಡ, ಮಹೇಶ್, ಶಂಕರೇಗೌಡ, ಸದಾನಂದ, ಕಾಂತರಾಜು, ಸಿದ್ದಾಚಾರಿ ಇದ್ದರು.