ಮಾಂಜರಿ: ಪಂಚ ಪಕ್ವಾನ್ನ ಭೋಜನದ ಜತೆಗೆ ಜ್ಞಾನ ದಾಸೋಹ ನೀಡುತ್ತಿರುವ ಬಂಡಿಗಣಿಯ ಚಕ್ರವರ್ತಿ ಅನ್ನದಾನೇಶ್ವರ ಸ್ವಾಮೀಜಿ ಕಾರ್ಯ ಪ್ರಶಂಸನೀಯ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗತ್ಪಾದರು ಹೇಳಿದರು.
ಸಮೀಪದ ಯಡೂರು ಗ್ರಾಮದ ಶ್ರೀ ವೀರಭದ್ರೇಶ್ವರ ವಿಶಾಳಿ ಜಾತ್ರಾ ಮಹೋತ್ಸವದಲ್ಲಿ ಬಂಡಿಗಣಿಯ ಚಕ್ರವರ್ತಿ ಅನ್ನದಾನೇಶ್ವರ ಸ್ವಾಮೀಜಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಮಹಾದಾಸೋಹಕ್ಕೆೆ ಗುರುವಾರ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಪ್ರತಿ ವಷರ್ದಂತೆ ಈ ಬಾರಿಯೂ ಕೂಡ ಬಂಡಿಗಣಿ ಮಠದಿಂದ ಮಹಾ ದಾಸೋಹ ನಡೆಯುತ್ತಿದೆ. ಹುಗ್ಗಿ, ಹೋಳಿಗೆ, ಹಾಲು, ತುಪ್ಪ, ಮಾದಲಿ, ಸಂಡಿಗೆ, ಜಿಲೇಬಿ, ಬಜಿ, ಅನ್ನ, ಮಸಾಲೆ ಅನ್ನ, ಸಾಂಬಾರು, ಬದನೆಕಾಯಿ ಪಲ್ಯ ಸೇರಿ ತರೇಹವಾರಿ ಖಾದ್ಯ ನೀಡುವ ಮೂಲಕ ಬಂಡಿಗಣಿ ಮಠದ ದಾಸೋಹ ಸಾಮಾನ್ಯ ದಾಸೋಹ ವಾಗದೆ ಮಹಾದಾಸೋಹವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯುತ್ತಿದೆ. ಬಂಡಿಗಣಿ ಮಠದ ದಾಸೋಹ ಸೇವೆ ಪರಿಗಣಿಸಿ ಚಕ್ರವರ್ತಿ ಅನ್ನದಾನೇಶ್ವರ ಶ್ರೀಗಳಿಗೆ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ.
ಶ್ರೀಗಳ ಕಾರ್ಯ ರಾಜ್ಯದಲ್ಲೆಡೆ ಪಸರಿಸಿ ಮಾದರಿಯಾಗಿದೆ. ಅನ್ನದಾನೇಶ್ವರ ಶ್ರೀಗಳು ಹಾಗೂ ಅವರ ಭಕ್ತರ ಮೇಲೆ ವೀರಭದ್ರೇಶ್ವರ ದೇವರ ಆಶೀರ್ವಾದ ಸದಾ ಇರುತ್ತದೆ ಎಂದು ತಿಳಿಸಿದರು.
ಬಂಡಿಗಣಿ ಮಠದ ಚಕ್ರವರ್ತಿ ಅನ್ನದಾನೇಶ್ವರ ಸ್ವಾಮೀಜಿ ಮಾತನಾಡಿ, ಬಂಡಿಗಣಿ ಮಠದಂತೆ ಯಡೂರು ಮಠಕ್ಕೆ ಕಷ್ಟಗಳು ಎದುರಾಗಿದ್ದವು. ಶ್ರೀಶೈಲ ಜಗದ್ಗುರುಗಳು ಧರ್ಮಾಧಿಕಾರಿಗಳಾಗಿ ಆಗಮಿಸಿದ ಬಳಿಕ ಸುಕ್ಷೇತ್ರ ಯಡೂರು ಪ್ರಗತಿ ಪಥದತ್ತ ಸಾಗುವ ಜತೆಗೆ ಜಾಗೃತ ಶ್ರದ್ಧಾ ಕೇಂದ್ರವಾಗಿದೆ. ಜಗದ್ಗುರುಗಳ ಆಶೀರ್ವಾದದಿಂದ ಬಂಡಿಗಣಿ ಮಠದ ದಾಸೋಹ ಬೃಹತ್ ಪ್ರಮಾಣದಲ್ಲಿ ಮುನ್ನಡೆಯುತ್ತಿದೆ ಎಂದರು.
ಯಡೂರು ಕ್ಷೇತ್ರದ ಉತ್ತರಾಧಿಕಾರಿ ರೇಣುಕ ದೇವರು, ಅಂಬಿಕಾನಗರದ ಶ್ರೀಗಳು, ಸಿಪಿಐ ವಿಶ್ವನಾಥ ಚೌಗಲಾ ಇತರರಿದ್ದರು.