ಜಿಲ್ಲೆ

ಅನ್ನಭಾಗ್ಯ ಯೋಜನೆ ಹಣಕ್ಕೆ ಗ್ರಹಣ

ಜಿ.ನಾಗರಾಜ್​ ಬೂದಿಕೋಟೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲಾಗಿ ನೀಡುತ್ತಿರುವ ಹಣ ಕಳೆದ ನಾಲ್ಕು ತಿಂಗಳಿಂದ ವಿವಿಧ ಕಾರಣಗಳಿಂದ ಫಲಾನುಭವಿಗಳ ಖಾತೆಗೆ ಜಮಾ ವಾಗಿಲ್ಲ.

ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಅಕ್ಕಿ ಪೂರೈಕೆಯಲ್ಲಿ ಸಮಸ್ಯೆ ಎದುರಾಗಿ ಈಗ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ನೀಡಲಾಗುತ್ತಿದೆ. ಉಳಿದ 5 ಕೆಜಿ ಅಕ್ಕಿ ಬದಲಿಗೆ ಪ್ರತಿ ಕೆಜಿ ಅಕ್ಕಿಗೆ 34 ರೂ.ನಂತೆ 5ಕೆಜಿ ಅಕ್ಕಿಗೆ ಒಟ್ಟು 170 ರೂ.ನೇರವಾಗಿ ಖಾತೆಗೆ ಜಮೆ ಮಾಡಲಾಗುತ್ತಿದೆ. ಆದರೆ ಆರಂಭದಲ್ಲಿ ಫಲಾನುಭವಿಗಳ ಖಾತೆಗೆ ಸರಿಯಾಗಿ ಬರುತ್ತಿತ್ತಾದರೂ ನಂತರದಲ್ಲಿ ಅನುದಾನದ ಕೊರತೆ ಸೇರಿ ವಿವಿಧ ಕಾರಣಗಳಿಂದ ಹಣ ಬರುವುದು ವಿಳಂಬವಾಗುತ್ತಿದೆ.

ಜಿಲ್ಲೆಯಲ್ಲಿ 29,670 ಅಂತ್ಯೋದಯ ಮತ್ತು 3,12,928 ಬಿಪಿಎಲ್​ ಕಾರ್ಡ್​ದಾರರಿದ್ದು, ಕಳೆದ ಅಕ್ಟೋಬರ್​ ತಿಂಗಳಿಂದ ಅನ್ನಭಾಗ್ಯ ಯೋಜನೆಯ ಹಣ ಫಲಾನುಭವಿ ಖಾತೆಗೆ ವಿವಿಧ ಕಾರಣಗಳಿಂದ ಜಮೆ ಆಗಿಲ್ಲ. ಮಾಹಿತಿಯ ಪ್ರಕಾರ 1,18,824 ಜನ ಅಂತ್ಯೋದಯ ಮತ್ತು 11,30,026 ಮಂದಿ ಬಿಪಿಎಲ್​ ಫಲಾನುಭವಿಗಳಿದ್ದು, ಸುಮಾರು 16 ಕೋಟಿ ಹಣ ಪ್ರತಿ ತಿಂಗಳಿಗೆ ಜಮೆ ಆಗಬೇಕಿದೆ.

ಕುಟುಂಬ ನಿರ್ವಹಣೆಗೆ ಹೆಚ್ಚುವರಿ ಅಕ್ಕಿ ಖರೀದಿ

ಕಳೆದ ಅಕ್ಟೋಬರ್​ನಿಂದ ಹಣ ಜಮೆ ಮಾಡದ ಕಾರಣ ಕುಟುಂಬ ನಿರ್ವಹಣೆಗೆ ಹೆಚ್ಚುವರಿ ಅಕ್ಕಿ ಖರೀದಿಸಲು ಸಮಸ್ಯೆ ಎದುರಾಗಿದೆ. ಖಾತೆಗೆ ಹಣ ಜಮೆ ಮಾಡುವುದಕ್ಕಿಂತ ಪ್ರತಿ ತಿಂಗಳು ಅಕ್ಕಿ ವಿತರಣೆ ಮಾಡಿದರೆ ಉತ್ತಮ, ಅಕ್ಕಿ ಸರಬರಾಜಿನಲ್ಲಿ ಸಮಸ್ಯೆ ಇದ್ದರೆ ಆಯಾ ತಿಂಗಳೇ ಹೆಚ್ಚುವರಿ ಹಣ ಜಮೆ ಮಾಡಿದರೆ ಉತ್ತಮ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಹಲವರಿಗಿಲ್ಲ ಸೌಲಭ್ಯ: ಕುಟುಂಬದ ಮುಖ್ಯಸ್ಥರು ಮೃತಪಟ್ಟು ಮನೆಯಲ್ಲಿ 18 ವರ್ಷದ ಒಳಗಿನ ಮಕ್ಕಳಿದ್ದರೆ ಅಂತಹ ಕಾರ್ಡ್​ಗಳಿಗೆ ಹಣ ಜಮೆ ಆಗುತ್ತಿಲ್ಲ. ಬ್ಯಾಂಕ್​ ಖಾತೆಗೆ ಆಧಾರ್​ ಲಿಂಕ್​ ಆಗದ, ಆಧಾರ್​ ಕಾರ್ಡ್​, ಬ್ಯಾಂಕ್​ ಮತ್ತು ಪಡಿತರ ಕಾರ್ಡ್​ನಲ್ಲಿ ಹೆಸರು ವ್ಯತ್ಯಾಸ ಇರುವವರು ಸೇರಿ ಹಲವು ಲೋಪದೋಷಗಳ ಕಾರಣದಿಂದ ಬಂಗಾರಪೇಟೆ ತಾಲೂಕು ಒಂದರಲ್ಲೇ ಸುಮಾರು 1,700 ಕಾರ್ಡ್​ದಾರರು ಹಣದಿಂದ ವಂಚಿತರಾಗಿದ್ದು, ಜಿಲ್ಲೆಯಲ್ಲಿ ಸುಮಾರು 5 ರಿಂದ 6 ಸಾವಿರ ಕಾಡ್​ದಾರರು ಅನರ್ಹರಾಗಿದ್ದಾರೆ. ಇದರೊಟ್ಟಿಗೆ ಅಂತ್ಯೋದಯ ಕಾರ್ಡಿನಲ್ಲಿ ಮೂರು ಜನಕ್ಕಿಂತ ಕಡಿಮೆ ಇರುವಂತಹ ಕಾರ್ಡ್​ದಾರರಿಗೆ ಹಣ ಜಮೆ ಆಗುತ್ತಿಲ್ಲ. ಅಕ್ಕಿ ಬದಲಾಗಿ ಹಣ ನೀಡುತ್ತಿರುವ ಕಾರಣ ಕೋಲಾರ ಜಿಲ್ಲೆ ಒಂದರಿಂದಲೇ ಕೋಟ್ಯಾಂತರ ರೂ. ಸರ್ಕಾರಕ್ಕೆ ಉಳಿತಾಯ ಆಗುತ್ತಿತ್ತು. ರಾಜ್ಯಾದ್ಯಾಂತ ನೂರಾರು ಕೋಟಿ ಸರ್ಕಾರದ ಬೊಕ್ಕಸಕ್ಕೆ ಉಳಿತಾಯ ಆಗುವಂತಾಗಿದೆ. ಇದರಿಂದಾಗಿಯೇ ಸರ್ಕಾರ ಅಕ್ಕಿ ಬದಲಾಗಿ ಹಣ ನೀಡಲು ಮುಂದಾಗುತ್ತಿದೆ ಎಂಬ ಆರೋಪವೂ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

"ಅನುದಾನದ ಸಮಸ್ಯೆ ಎದುರಾಗಿಲ್ಲವಾಗಿದ್ದು, ಹಲವು ಕಾರಣಗಳಿಂದ ವಿಳಂಬವಾಗಿದೆ. ಅಕ್ಟೋಬರ್​ನ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲು ಟ್ರೆಜರಿಗೆ ಕಳುಹಿಸಲಾಗಿದೆ. ಮುಂದಿನ ಒಂದೆರೆಡು ದಿನಗಳಲ್ಲಿ ಹಣ ಜಮೆ ಆಗಲಿದೆ. ಮುಂದಿನ ವಾರದೊಳಗೆ ನವೆಂಬರ್​ ತಿಂಗಳ ಹಣ ಜಮೆ ಮಾಡಲಾಗುತ್ತದೆ. ನಂತರ ಒಂದು ತಿಂಗಳ ಹಣ ಬಾಕಿ ಇರುತ್ತದೆ ಅದನ್ನೂ ಶೀಘ್ರ ಜಮೆ ಮಾಡಲಾಗುತ್ತದೆ."

- ಲತಾ ಡಿಡಿ, ಆಹಾರ ಇಲಾಖೆ ಕೋಲಾರ