ಜಿಲ್ಲೆ

ಲಾರಿ, ಲಕ್ಷಾಂತರ ರೂ. ಮೌಲ್ಯದ ಅಕ್ಕಿ ವಶ

Gadag

ಗಜೇಂದ್ರಗಡ: ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ಸಾಗಣೆ ಆರೋಪದಡಿ ಲಾರಿ ಸಮೇತ ಲಕ್ಷಾಂತರ ರೂ. ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಂಡ ಘಟನೆ ಇಲ್ಲಿನ ಸುಖಸಾಗರ ಡಾಬಾ ಬಳಿ ಬುಧವಾರ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕ ಮಂಜುನಾಥ ತಳ್ಳಿಹಾಳ ಹಾಗೂ ಸ್ಥಳೀಯ ಪೊಲೀಸರು ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ. ಅನ್ನಭಾಗ್ಯ ಯೋಜನೆಯ ಅಕ್ಕಿ ಇರಬಹುದು ಎಂದು ಶಂಕಿಸಲಾಗಿದ್ದು, ಲಾರಿಯಲ್ಲಿ 50 ಕೆಜಿ ತೂಕದ 600ರಿಂದ 700 ಅಕ್ಕಿ ಚೀಲಗಳು ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಕೆಲ ತಿಂಗಳಿನಿಂದ ಜಿಲ್ಲೆಯಲ್ಲಿ ಅನ್ನಭಾಗ್ಯ ಅಕ್ಕಿಯು ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿತ್ತು. ಪಟ್ಟಣದಿಂದ ಕುಷ್ಟಗಿ ಕಡೆಗೆ ಲಾರಿ ಸಾಗುತಿದ್ದ ಸಮಯದಲ್ಲಿ ಮಂಜುನಾಥ ತಳ್ಳಿಹಾಳ ಅವರು ದಾಳಿ ನಡೆಸಿ ಲಾರಿ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಇನ್ನೂ ಪ್ರಕರಣ ದಾಖಲಾಗಿಲ್ಲ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಂಗ್ರೆಸ್​ನಿಂದ ಮನವಿ: ಪಟ್ಟಣದಲ್ಲಿ ಅನ್ನಭಾಗ್ಯ ಪಡಿತರ ಅಕ್ಕಿಯನ್ನು ಆಕ್ರಮವಾಗಿ ಸಾಗಿಸುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಮುಖಂಡರು ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಅನ್ನಭಾಗ್ಯ ಮೂಲಕ ಬಡವರ ಹಸಿವನ್ನು ನೀಗಿಸಲು ಮುಂದಾಗಿದ್ದರು. ಆದರೆ ಪ್ರಸ್ತುತ ದಿನಗಳಲ್ಲಿ ಬಡವರ ಅಕ್ಕಿ ಕಾಳಸಂತೆಗೆ ಮಾರಾಟವಾಗುತ್ತಿದೆ ಎನ್ನುವ ಆರೋಪಗಳಿಗೆ ಸಾಕ್ಷಿ ಸಿಕ್ಕಂತಾಗಿದೆ. ಹೀಗಾಗಿ ಅಕ್ಕಿ ಸಾಗಾಟದಾರರ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾ.ಪಂ. ಉಪಾಧ್ಯಕ್ಷ ಶಶಿಧರ ಹೂಗಾರ, ಬಿ.ಎಸ್. ಶೀಲವಂತರ, ಶಿವರಾಜ ಘೊರ್ಪಡೆ, ಎಂ.ಎಸ್.ಹಡಪದ, ಪುರಸಭೆ ಸದಸ್ಯರಾದ ರಾಜು ಸಾಂಗ್ಲೀಕರ, ಮುರ್ತಜಾ ಡಾಲಾಯತ, ಮಾಜಿ ಸದಸ್ಯ ಬಸವರಾಜ ಬಂಕದ, ಎಂ.ಎಚ್.ಕೋಲಕಾರ, ಉಮೇಶ ರಾಠೋಡ, ಯಲ್ಲಪ್ಪ ಬಂಕದ, ಬಾಲು ರಾಠೋಡ, ಸಿದ್ದು ಗೊಂಗಡಶೆಟ್ಟಿಮಠ ಇತರರು ಇದ್ದರು.