ಅಕ್ರಮ ಪಡಿತರ ಚೀಟಿ ರದ್ದು ಕೋರಿ ತಹಸೀಲ್ದಾರ್ ಮಲ್ಲೇಶ್​ಬಿ. ಪೂಜಾರ್​ಗೆ ಮನವಿ ಸಲ್ಲಿಸಿದ ಸ್ವಾಮಿನಾಥ್. 
ಜಿಲ್ಲೆ

ಅನ್ನಭಾಗ್ಯ ಅಕ್ಕಿ ಮಾರಿದ ಪತ್ನಿ ವಿರುದ್ಧ ಪಾದಯಾತ್ರೆ!

ಸಾಗರ: ಮನೆಯಲ್ಲಿನ ಅಕ್ರಮವನ್ನು ಬೆಳಕಿಗೆ ತಂದು, ಸರ್ಕಾರದ ಯೋಜನೆ ದುರ್ಬಳಕೆ ಮಾಡಿಕೊಂಡ ಕಾರಣ ಪಡಿತರ ಚೀಟಿ ರದ್ದುಪಡಿಸಬೇಕು ಎಂದು ಆಗ್ರಹಪಡಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ರಾಷ್ಟ್ರಧ್ವಜ ಹಿಡಿದು 20 ಕಿ.ಮೀ. ಅರೆಬೆತ್ತಲೆ ಪಾದಯಾತ್ರೆ ನಡೆಸಿ ಸಾಗರ ತಹಸೀಲ್ದಾರ್​ಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದ್ದು ತಾಲೂಕು ಆಡಳಿತ ಸೂಕ್ತ ಕ್ರಮ ಜರುಗಿಸಬೇಕು. ಅಗತ್ಯ ಇಲ್ಲದವರ ಪಡಿತರ ಚೀಟಿ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಸ್ವಾಮಿನಾಥ್ ಹೊಸಂತೆ ಗ್ರಾಮದಿಂದ ಸಾಗರವರೆಗೆ ರಾಷ್ಟ್ರಧ್ವಜ ಹಿಡಿದು 20 ಕಿ.ಮೀ. ಅರೆಬೆತ್ತಲೆ ಪಾದಯಾತ್ರೆ ನಡೆಸಿ ತಹಸೀಲ್ದಾರ್ ಮಲ್ಲೇಶ್ ಬಿ.ಪೂಜಾರ್​ಗೆ ಮನವಿ ಸಲ್ಲಿಸಿದರು.

ಕುಟುಂಬದ ಪಡಿತರ ಚೀಟಿಯನ್ನೂ ರದ್ದುಪಡಿಸುವಂತೆ ಒತ್ತಾಯಿಸಿದರು. ಸ್ವಾಮಿನಾಥ್​ಗೆ ಹೊಸ ಅಂಗಿ ಕೊಡಿಸಿ, ಬಸ್ ಚಾರ್ಜ್​ಗೆ ಹಣ ನೀಡಿ ಮಾನವೀಯತೆ ಮೆರೆದ ತಹಸೀಲ್ದಾರ್ ಮಲ್ಲೇಶ್ ಬಿ.ಪೂಜಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.

ಒಂದು ಕ್ವಿಂಟಾಲ್ ಅಕ್ಕಿ: ‘ಕೇಂದ್ರ ಮತ್ತು ರಾಜ್ಯ ಸರ್ಕಾರ ಬಡಜನರು ಹಸಿವಿನಿಂದ ಬಳಲಬಾರದು ಎಂದು ಪಡಿತರ ಅಕ್ಕಿಯನ್ನು ಉಚಿತವಾಗಿ ಕೊಡುತ್ತಿವೆ. ನಮ್ಮ ಮನೆಯಲ್ಲಿ ಒಂದು ಕ್ವಿಂಟಾಲ್​ನಷ್ಟು ಪಡಿತರ ಅಕ್ಕಿಯನ್ನು ಬಡವರಿಗೆ ಕೊಡಲು ಸಂಗ್ರಹಿಸಿ ಇಡಲಾಗಿತ್ತು. ಆದರೆ, ನನ್ನ ಪತ್ನಿ ನನಗೆ ಗೊತ್ತಿಲ್ಲದೆ ಅಕ್ಕಿಯನ್ನು ಕಾಳಸಂತೆಕೋರರಿಗೆ ಮಾರಾಟ ಮಾಡಿದ್ದಾರೆ. ಇದರಿಂದ ನನಗೆ ಬೇಸರವಾಗಿದೆ. ಈ ಹಿನ್ನೆಲೆಯಲ್ಲಿ ಅರೆಬೆತ್ತಲೆಯಾಗಿ 20 ಕಿಮೀ ಪಾದಯಾತ್ರೆ ನಡೆಸಿ ನನ್ನ ಪಡಿತರ ಚೀಟಿಯನ್ನು ರದ್ದುಮಾಡುವಂತೆ ಮನವಿ ಮಾಡಿದ್ದೇನೆ’ ಎಂದು ಸ್ವಾಮಿನಾಥ್ ಹೇಳಿದರು.

ಸ್ವಾಮಿನಾಥ್ ಸಾಮಾಜಿಕ ಕಳಕಳಿ ಅನುಕರಣೀಯವಾಗಿದೆ. ನಾನು ಅವರ ಮನೆಗೆ ಹೋಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸುತ್ತೇನೆ. ಇದರ ಜತೆಗೆ ತಾಲೂಕಿನಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಯಾರಾದರೂ ಮಾರಾಟ ಮಾಡುವುದಾಗಲಿ, ಖರೀದಿ ಮಾಡುವುದಾಗಲಿ ಕಂಡು ಬಂದರೆ ಅಂತಹವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು. | ಮಲ್ಲೇಶ್ ಬಿ. ಪೂಜಾರ್ ತಹಸೀಲ್ದಾರ್

ಅಕ್ರಮ ಆರೋಪ: ತಾಲೂಕಿನ ಬೇರೆಬೇರೆ ಭಾಗದಲ್ಲಿ ಇಂತಹ ಅವ್ಯವಹಾರ ನಡೆಯುತ್ತಿದೆ. ಪಡಿತರ ಅಕ್ಕಿಯನ್ನು ಖರೀದಿ ಮಾಡುವ ರೈಸ್​ವಿುಲ್, ಅಂಗಡಿಯವರ ಮೇಲೆ ದಾಳಿ ನಡೆಸಿ ಸೂಕ್ತಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.