ಶಿವರಾಜ. ಎಂ ಬೆಂಗಳೂರು ಗ್ರಾಮಾಂತರ
ಅಕ್ಕಿ ಬದಲಿಗೆ ಪರ್ಯಾಯವಾಗಿ ಹಣ ನೀಡುವ ರಾಜ್ಯ ಸರ್ಕಾರದ ಯೋಜನೆಗೆ ಗ್ರಹಣ ಹಿಡಿದಿದೆ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಪ್ರತಿನಿಧಿಸುವ ಗ್ರಾಮಾಂತರ ಜಿಲ್ಲೆಯಲ್ಲಿಯೇ ಸರ್ಕಾರದ ಯೋಜನೆಗೆ ವಿಘ್ನ ಎದುರಾಗಿದೆ. ಅನುದಾನದ ಕೊರತೆ ನೆಪದಲ್ಲಿ ಜಿಲ್ಲೆಯಲ್ಲಿ 4 ತಿಂಗಳಿಂದ ಲಾನುಭವಿಗಳ ಖಾತೆ ಹಣ ಜಮೆಯಾಗಿಲ್ಲ ಎನ್ನಲಾಗಿದ್ದು ಲಾನುಭವಿಗಳ ಬೇಸರಕ್ಕೆ ಕಾರಣವಾಗಿದೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲಾಗಿ ನೀಡುತ್ತಿರುವ ಹಣ ಜಮೆಯಾಗುತ್ತಿಲ್ಲ ಎಂಬುದು ಜಿಲ್ಲೆಯ ಲಾನುಭವಿಗಳ ಬೇಡರವಾಗಿದೆ. ಈ ಬಗ್ಗೆ ಅಧಿಕಾರಿಗಳ ಮೊರೆ ಹೋಗುತ್ತಿರುವ ಲಾನುಭವಿಗಳು ಅಧಿಕಾರಿಗಳ ನಿರುತ್ತರದಿಂದ ಬೇಸತ್ತು ಹೋಗಿದ್ದಾರೆ.
ಆದ್ಯತ ಪಡಿತರ ಚೀಟಿ ಹೊಂದಿದವರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ನಿಯಮದಡಿ 5 ಕೆ.ಜಿ ಅಕ್ಕಿಯೊಂದಿಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿ ನೀಡುವ ಯೋಜನೆಗೆ ಅಂಕಿತ ಹಾಕಿತ್ತು. ಇಷ್ಟು ಪ್ರಮಾಣದಲ್ಲಿ ಅಕ್ಕಿ ವಿತರಿಸಲು ನಾನಾ ಸಮಸ್ಯೆ ಎದುರಾಗ ಹಿನ್ನೆಲೆಯಲಿ ್ಲ5 ಕೆಜಿ ಅಕ್ಕಿ ಬದಲಿಗೆ ಕೆಜಿಗೆ 34 ರೂಪಾಯಿಯಂತೆ ಪಡಿತರ ಚೀಟಿ ಹೊಂದಿರುವ ಕುಟುಂಬದ ಮುಖ್ಯಸ್ಥರ ಖಾತೆಗೆ ಡಿಬಿಟಿ ಮೂಲಕ ಹಣ ಸಂದಾಯ ಮಾಡುವ ಯೋಜನೆ ಅನುಷ್ಟಾನಗೊಂಡಿತ್ತು. ಅದರಂತೆ ಯೋಜನೆಗೆ ಚಾಲನೆ ದೊರೆತ ದಿನದಿಂದಲೂ ದಿನಾಂಕಕ್ಕೆ ಸರಿಯಾಗಿ ಖಾತೆಗೆ ಹಣ ಜಮೆಯಾಗುತ್ತಿತ್ತು. ಇದು ಗ್ರಾಮೀಣ ಪ್ರದೇಶದ ಲಾನುಭವಿಗಳಿಗೆ ಸಾಕಷ್ಟು ನೆರವಿಗೆ ಬರುತ್ತಿತ್ತು. ಆದರೆ ಕಳೆದ ನಾಲ್ಕು ತಿಂಗಳಿಂದ ಏಕಾಏಕಿ ಖಾತೆಗೆ ಹಣ ಜಮೆಯಾಗುವುದು ಸ್ಥಗಿತವಾಗಿದೆ. ಇದರಿಂದ ಕಂಗಾಲಾಗಿರುವ ಲಾನುಭವಿಗಳು ಪ್ರತಿನಿತ್ಯ ಖಾತೆಯನ್ನು ಪರಿಶೀಲಿಸುವಂತಾಗಿದೆ.
ಹಣಕ್ಕಾಗಿ ಎದುರು ನೋಡುತ್ತಿರುವ ಜನ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2024 ಸೆಪ್ಟೆಂಬರ್‌ನಲ್ಲಿ 2,09,677 ಫಲಾನುಭವಿಗಳಿಗೆ 12,24,62,222 ರೂಪಾಯಿ ಹಣ ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ. ಆದರೆ ಅಕ್ಟೋಬರ್‌ನಿಂದ ಜನವರಿವರೆಗೆ ಹಣ ಜಮೆಯಾಗಿಲ್ಲ ಎನ್ನಲಾಗಿದೆ. ಇದರಿಂದ ಗೊಂದಲಗೊಳಕ್ಕಾಗಿರುವ ಫಲಾನುಭವಿಗಳು ಪ್ರತಿನಿತ್ಯ ಬ್ಯಾಂಕ್‌ಗಳ ಬಳಿ ಸುಳಿದಾಡುವಂತಾಗಿದೆ. ಸಮಸ್ಯೆ ಏನಾಗಿದೆ ಹಣ ಏಕೆ ಬರುತ್ತಿಲ್ಲ ಎಂಬುದಾಗಿ ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಇದೇ ರೀತಿ ಈ ಮೊದಲು ಸಹ 3 ತಿಂಗಳು ಹಣ ಸ್ಥಗಿತಗೊಂಡಿತ್ತು. ನಂತರದ ದಿನಗಳಲ್ಲಿ ಅಷ್ಟೂ ಹಣ ಒಮ್ಮೆಗೆ ಜಮೆಯಾಗಿತ್ತು ಎನ್ನಲಾಗಿದ್ದು ಈ ಬಾರಿಯೂ ಇದೇ ರೀತಿ ಒಟ್ಟಿಗೆ ಹಣ ಜಮೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಲಾನುಭವಿಗಳು ಕಾಯುತ್ತಿದ್ದಾರೆ.
ಹಲವರಿಗಿಲ್ಲ ಭಾಗ್ಯ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ 2.30 ಲಕ್ಷ ಬಿಪಿಎಲ್ ಪಡಿತರ ಚೀಟಿದಾರರಿದ್ದರೂ ಇದರಲ್ಲಿ ಬ್ಯಾಂಕ್ ಖಾತೆ, ಕೆವೈಸಿ ಒಳಗೊಂಡಂತೆ ಹಲವು ಕಾರಣಗಳಿಂದ ಕೆಲವು ಕುಟುಂಬ ಈ ಯೋಜನೆಯಿಂದ ಹೊರಗುಳಿದಿವೆ ಎಂಬುದು ಅಂಕಿಅಂಶಗಳಿಂದ ತಿಳಿದುಬಂದಿದೆ.
ಈ ಯೋಜನೆಯಡಿ ಜಿಲ್ಲೆಯಲ್ಲಿ ಜುಲೈ 2023ರಿಂದ ಆಗಸ್ಟ್ 24ರ ಅವಧಿವರೆಗೆ 163,46,30,777ರೂಪಾಯಿ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ. 2023 ಜುಲೈನಲ್ಲಿ 1,70,287 ಫಲಾನುಭವಿಗಳಿಗೆ 9,84,50,910ರೂ ಪಾವತಿಸಲಾಗಿತ್ತು. 2024ರ ಜುಲೈನಲ್ಲಿ 2,09,491 ಏರಿಕೆಯಾಗುವ ಮೂಲಕ 12,19,63,610 ರೂಪಾಯಿ ಖಾತೆಗಳಿಗೆ ಪಾವತಿಸಲಾಗಿತ್ತು. ಆಗಸ್ಟ್‌ನಲ್ಲಿ 2,09,485 ಫಲಾನುಭವಿಗಳಿಗೆ 12,22,60,260 ರೂ ಪಾವತಿಸಲಾಗಿದೆ. ಸೆಪ್ಟೆಂಬರ್‌ನಲ್ಲಿ 2,09,677 ಖಾತೆಗಳಿಗೆ 12,24,52,220 ರೂಪಾಯಿ ಜಮೆಯಾಗಿತ್ತು.
2024ರ ಸೆಪ್ಟೆಂಬರ್‌ವರೆಗೆ ಅನ್ನಭಾಗ್ಯದ ಯೋಜನೆಯಡಿ 2,09,677 ಫಲಾನುಭವಿಗಳಿಗೆ 12,24,62,220 ರೂಪಾಯಿ ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ. ಕೆಲವು ಕಾರಣಗಳಿಂದ ಕಳೆದ 4 ತಿಂಗಳಿಂದ ಖಾತೆಗೆ ಹಣ ಜಮೆಯಾಗಿಲ್ಲ. ಇನ್ನು ನಾಲ್ಕು ತಿಂಗಳ ಹಣ ಡಿಬಿಟಿ ಮೂಲಕ ಪಾವತಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಅನುದಾನ ಬಿಡುಗಡೆಯಾದ ಕೂಡಲೇ ಪಡಿತರಚೀಟಿದಾರರ ಖಾತೆಗೆ ಹಣ ಜಮೆಯಾಗಲಿದೆ.
ಶಂಕರಮೂರ್ತಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಬೆಂ.ಗ್ರಾಮಾಂತರ
ಅಕ್ಕಿ ಬದಲಿಗೆ ಕೊಡಮಾಡುವ ಹಣವನ್ನು ಸರಿಯಾಗಿ ನೀಡುತ್ತಿಲ್ಲ, ಈ ಹಿಂದೆಯೂ ಮೂರು ತಿಂಗಳು ಹಣ ಹಾಕಿರಲಿಲ್ಲ. ನಂತರದಲ್ಲಿ ಒಟ್ಟಿಗೆ ಹಾಕಿದ್ದರು. ಈಗ ಮತ್ತೆ ಇದೇ ರೀತಿ ಆಗಿದೆ ನಾಲ್ಕು ತಿಂಗಳಿಂದ ಖಾತೆಗೆ ಹಣ ಬಂದಿಲ್ಲ. ಮುಂದಿನ ದಿನಗಳಲ್ಲಾದರೂ ಹಣ ಹಾಕುತ್ತಾರೆಯೇ ಕಾದು ನೋಡಬೇಕಿದೆ.
ಸುನಂದಮ್ಮ, ದಾಬಸ್‌ಪೇಟೆ