ರಾಯಚೂರಿನ ಹೊರವಲಯದ ಮುಗಳಕೋಡ ಮಠದ ಆವರಣದಲ್ಲಿ ಈಶ್ವರ ದೇವಸ್ಥಾನ ಸಮಿತಿಯಿಂದ ಬುಧವಾರ ಶ್ರೀಶೈಲ ಯಾತ್ರಾರ್ಥಿಗಳಿಗಾಗಿ ಅನ್ನ ದಾಸೋಹ ಏರ್ಪಡಿಸಲಾಗಿತ್ತು. ದೇವಸ್ಥಾನ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ, ಪದಾಕಾರಿಗಳಾದ ಗಿರಿಮಲ್ಲನಗೌಡ, ಶಿವನಗೌಡ, ವಿರುಪನಗೌಡ ಬಂಡಿ, ನರೇಶ ಹೊಕ್ರಾಣಿ ಇದ್ದರು. 
ಜಿಲ್ಲೆ

ಶ್ರೀಶೈಲ ಯಾತ್ರಾರ್ಥಿಗಳಿಗೆ ಅನ್ನ ದಾಸೋಹ

ರಾಚಯ್ಯ ಸ್ವಾಮಿ

ರಾಯಚೂರು: ನಗರದ ಹೊರವಲಯದ ಮುಗಳಕೋಡ ಜಿಡಗಾ ಮಠದ ಆವರಣದಲ್ಲಿ ಶ್ರೀಶೈಲದಿಂದ ತಮ್ಮ ಗ್ರಾಮಗಳಿಗೆ ತೆರಳುತ್ತಿರುವ ಯಾತ್ರಾರ್ಥಿಗಳಿಗಾಗಿ ಬುಧವಾರ ಡ್ಯಾಡಿ ಕಾಲನಿಯ ಈಶ್ವರ ದೇವಸ್ಥಾನ ಸಮಿತಿಯಿಂದ ಅನ್ನ ದಾಸೋಹ ಏರ್ಪಡಿಸಲಾಗಿತ್ತು.
ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಹಾಗೂ ದೇವಸ್ಥಾನ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ ದಾಸೋಹಕ್ಕೆ ಚಾಲನೆ ನೀಡಿ ಮಾತನಾಡಿ, ದೇವಸ್ಥಾನ ಸಮಿತಿಯಿಂದ ಪ್ರತಿ ವರ್ಷ ಶ್ರೀಶೈಲ ಯಾತ್ರಾರ್ಥಿಗಳಿಗಾಗಿ ಅನ್ನದಾಸೋಹ ಏರ್ಪಡಿಸಲಾಗುತ್ತಿದೆ.
ಕಳೆದ ವರ್ಷ ಸುಮಾರು 25 ಸಾವಿರಕ್ಕೂ ಮೇಲ್ಪಟ್ಟು ಯಾತ್ರಾರ್ಥಿಗಳು ಪ್ರಸಾದ ಸ್ವೀಕರಿಸಿದ್ದು, ಈ ವರ್ಷ ಸುಮಾರು 35 ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳು ಅನ್ನ ದಾಸೋಹದ ಪ್ರಯೋಜನ ಪಡೆದಿದ್ದಾರೆ. ಅನ್ನ ದಾಸೋಹಕ್ಕೆ ನಗರದ ಉದ್ಯಮಿಗಳು, ಸಮಾನ ಮನಸ್ಕರು ಕೈಜೋಡಿಸುವ ಮೂಲಕ ಯಶಸ್ವಿಗೊಳಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಡಾ.ಶಿವಕುಮಾರ ಸ್ವಾಮೀಜಿಗಳ ಜಯಂತೋತ್ಸವ ಆಚರಿಸಿ, ತ್ರಿಕಾಲ ಸತ್ಯ ಗ್ರಂಥ ಬಿಡುಗಡೆ ಮಾಡಲಾಯಿತು. ಯಾತ್ರಾರ್ಥಿಗಳಿಗೆ ಔಷಧೋಪಚಾರದ ವ್ಯವಸ್ಥೆ ಮಾಡಲಾಗಿತ್ತು.
ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಸೋಮವಾರ ಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದೇವಸ್ಥಾನ ಸಮಿತಿ ಪದಾಕಾರಿಗಳಾದ ಶಿವಯೋಗಿ ಪಾಟೀಲ್, ಗಿರಿ ಮಲ್ಲನಗೌಡ, ಬಸವರಾಜ ಯಾಪಲದಿನ್ನಿ, ಜಿ.ನೀಲಕಂಠಯ್ಯ, ವಿರುಪನಗೌಡ ಬಂಡಿ, ನರೇಶ ಹೊಕ್ರಾಣಿ, ನಾಗಯ್ಯಸ್ವಾಮಿ, ಪರಮೇಶ್ವರಪ್ಪ ಸಾಲಿಮಠ, ಪರಪ್ಪಗೌಡ ಕಲ್ಮಲ, ಬಾಚನಗೌಡ ಗಣೇಕಲ್, ಅಯ್ಯನಗೌಡ ಮಹಾಮನಿ, ಶಿವನಗೌಡ, ಬಸವರಾಜ ಸಕ್ರಿ, ಶರಣಬಸವ ಹಿರೇಮಠ, ಸದಾನಂದ ಪ್ರಭು, ಪ್ರಭು ಶಾಸಿ ಉಪಸ್ಥಿತರಿದ್ದರು.