ಜಿಲ್ಲೆ

ಮದ್ಯ ಸೇವನೆ, ಧೂಮಪಾನಕ್ಕಿಲ್ಲ ಅಂಕುಶ

ಎನ್.ವೆಂಕಟೇಶ್

ಕಾರ್ಯಾಚರಣೆ ನಡೆಸಿದರೂ ನಿಯಂತ್ರಣವಾಗಿಲ್ಲ | ಅನೈತಿಕ ಚಟುವಟಿಕೆ ತಾಣವಾದ ಬಸ್ ನಿಲ್ದಾಣ, ಕೆರೆ-ಕಟ್ಟೆ ಪ್ರದೇಶ


ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ನಿರಂತರ ಕಾರ್ಯಾಚರಣೆ ನಡುವೆಯೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ ಮತ್ತು ಧೂಮಪಾನದ ನಿಯಮದ ಉಲ್ಲಂಘನೆ ಪ್ರಕರಣ ನಿರಂತರವಾಗಿ ವರದಿಯಾಗುತ್ತಿವೆ.
ಹೌದು! ಸರ್ಕಾರಿ ಕಚೇರಿ ಆವರಣ, ಬಯಲು ಪ್ರದೇಶ ಮತ್ತು ಬಾರ್‌ಗಳ ಎದುರು ಸೇರಿ ಹಲವೆಡೆ ಬಿದ್ದಿರುವ ಮದ್ಯದ ಖಾಲಿ ಬಾಟಲ್‌ಗಳು ಸಾರ್ವಜನಿಕ ಮದ್ಯಪಾನಕ್ಕೆ ಸಾಕ್ಷಿಯಂತಿವೆ. ಇದು ಕಗ್ಗತ್ತಲಿನ ವ್ಯವಹಾರ. ಮತ್ತೊಂದೆಡೆ ಹಾಡಹಗಲಿನಲ್ಲಿಯೇ ಎಲ್ಲೆಂದರಲ್ಲಿ ಬಿಡಿ ಸಿಗರೇಟ್ ಸೇದಿ ಹೊಗೆ ಬಿಡುವ ದೃಶ್ಯ ಸಾಮಾನ್ಯವಾಗಿದೆ.
ಜಿಲ್ಲಾ ಕೇಂದ್ರದ ನಗರದ ಎಪಿಎಂಸಿ ಮಾರುಕಟ್ಟೆ, ತಾಪಂ ಕಚೇರಿ ಮತ್ತು ಕೃಷಿ ಇಲಾಖೆ, ನಗರಸಭೆ ಖಾಸಗಿ ಬಸ್ ನಿಲ್ದಾಣ, ಕನ್ನಡ ಕಲಾ ಭವನ, ಕಂದವಾರ ಕೆರೆಯ ಕಟ್ಟೆ ಪ್ರದೇಶ ಸೇರಿ ಎಲ್ಲೆಂದರಲ್ಲಿ ಮದ್ಯದ ಸೇವಿಸಿ ಬಿಸಾಡಿದ ಪ್ಯಾಕೆಟ್‌ಗಳು, ಬಾಟಲ್‌ಗಳು ಬಿದ್ದಿರುತ್ತವೆ. ವ್ಯಸನಿಗಳು ಕಗತ್ತಲಿನಲ್ಲಿ ಒಂದೆಡೆ ಕುಳಿತು, ಮದ್ಯ ಸೇವಿಸುತ್ತಿದ್ದು, ಅನೇಕ ಸ್ಥಳಗಳು ಅನೈತಿಕ ಚಟುವಟಿಕೆಯ ತಾಣಗಳಾಗುತ್ತಿವೆ.

ಸಾರ್ವಜನಿಕ ಧೂಮಪಾನ
ಬಹುತೇಕ ಟೀ ಅಂಗಡಿ, ಕಾಂಡಿಮೆಂಟ್ಸ್, ಮಾಂಸಾಹಾರಿ ಹೋಟೆಲ್ ಆವರಣ, ಖಾಸಗಿ ಬಸ್ ನಿಲ್ದಾಣ ಸೇರಿ ಎಲ್ಲೆಂದರಲ್ಲಿ ಸಾರ್ವಜನಿಕವಾಗಿ ಧೂಮಪಾನ ಮಾಡುವುದು ವರದಿಯಾಗುತ್ತಿದ್ದರೂ, ಹಿಂದಿಗಿಂತಲೂ ಈ ಸಂಖ್ಯೆ ಕಡಿಮೆಯಾಗಿರುವುದು ಖುಷಿಯ ವಿಚಾರ. ಇನ್ನು ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಪ್ರಶ್ನಿಸುವುದಕ್ಕೆ ಸಂಬಂಧಿಸಿದಂತೆ ಅಲ್ಲಲ್ಲಿ ಗಲಾಟೆ ಪ್ರಕರಣಗಳು ವರದಿಯಾಗುತ್ತಿರುತ್ತವೆ. ನಿಯಮ ಪಾಲನೆಯ ಸಲಹೆಯನ್ನು ಸ್ವೀಕರಿಸದೆ ನಿಂದಿಸಲಾಗುತ್ತದೆ.

ಒಂದೇ ದಿನ 22 ಪ್ರಕರಣ ದಾಖಲು
ಚಿಕ್ಕಬಳ್ಳಾಪುರದಲ್ಲಿ ನಗರದಲ್ಲಿ ಅಧಿಕಾರಿಗಳು ದಾಳಿ ನಡೆಸಿ, ಕೊಟ್ಪಾ 22 ಪ್ರಕರಣ ದಾಖಲಿಸಿಕೊಂಡಿದ್ದು 2500 ರೂ. ದಂಡ ಸಂಗ್ರಹಿಸಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ತಾಲೂಕು ತನಿಖಾದಳ ತಂಡವು ನಿರಂತರವಾಗಿ ಕಾರ್ಯಾಚರಣೆ ಕೈಗೊಂಡು ದಂಡ ವಿಧಿಸುತ್ತಿದೆ. ಜತೆಗೆ ಅರಿವು ಮೂಡಿಸಿ, ಸಲಹೆ ಸೂಚನೆ ನೀಡುತ್ತಿದೆ. ಪ್ರಸ್ತುತ ತಂಬಾಕುಮುಕ್ತ ಯುವ ಅಭಿಯಾನ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಇದರಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಮತ್ತು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಮಂಗಳವಾರ ಚಿಕ್ಕಬಳ್ಳಾಪುರದ ಬಿ.ಬಿ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ದಾಳಿ ನಡೆಸಿ ನಿಯಮಬಾಹಿರವಾಗಿ ತಂಬಾಕು ಪದಾರ್ಥಗಳನ್ನು ವಾರುತ್ತಿದ್ದ ಅಂಗಡಿ ವಾಲೀಕರಿಗೆ ದಂಡ ವಿಧಿಸಲಾಗಿದೆ. 22 ಪ್ರಕರಣಗಳಲ್ಲಿ 2500 ರೂ. ದಂಡ ಸಂಗ್ರಹವಾಗಿದೆ.

ದಾಳಿ ತಂಡದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಮಂಜುಳಾ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸವಾಜ ಕಾರ್ಯಕರ್ತ ಮಂಜುನಾಥ, ತಾಲೂಕು ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿಗಳಾದ ನಾರಾಯಣಸ್ವಾಮಿ ಮತ್ತು ಗಂಗಾಧರ್ ಮತ್ತಿತರರು ಇದ್ದರು.

ತಂಬಾಕು ತ್ಯಜಿಸಿ
ತಂಬಾಕಿನಲ್ಲಿ 700 ವಿಷಯುಕ್ತ ರಾಸಾಯನಿಕಗಳಿದ್ದು, ಸೇವನೆಯಿಂದ ದೀರ್ಕಾಲದ ಆರೋಗ್ಯ ಸಂಬಂಧಿತ ಕಾಯಿಲೆಗಳು ಬರುತ್ತವೆ. ಇದಕ್ಕೆ ಮಾದಕ ಉತ್ಪನ್ನ ತ್ಯಜಿಸಿ ಆರೋಗ್ಯಯುತವಾಗಿ ಬದುಕು ಸಾಗಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುವಾರ್ ಸಲಹೆ ನೀಡಿದ್ದಾರೆ.
ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ನಿಷೇಧಿಸಿದ್ದು, ಒಂದು ವೇಳೆ ನಿಯಮ ಉಲ್ಲಂಸಿದರೆ ದಂಡ ವಿಧಿಸಲಾಗುತ್ತದೆ. ಅಂಗಡಿ ವಾಲೀಕರು ಕಡ್ಡಾಯವಾಗಿ ಧೂಮಪಾನ ನಿಷೇಧಿತ ವಲಯ ಎಂಬ ನಾಮಫಲಕವನ್ನು ಅಳವಡಿಸಿರಬೇಕು ಎಂದು ಜಿಲ್ಲಾ ಸರ್ವೇಕ್ಷಾಧಿಕಾರಿ ಡಾ. ಕಷ್ಣಪ್ರಸಾದ್ ತಿಳಿಸಿದ್ದಾರೆ.