ಜಿಲ್ಲೆ

ಕೋಡಿ ಮೂಲಕ ಸಮುದ್ರಕ್ಕೆ ಹರಿದ ಹಳ್ಳ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಅಂಕೋಲಾ: ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಪೂಜಗೇರಿ ನದಿಬಾಗ ಹಳ್ಳದಲ್ಲಿ ಹಿನ್ನೀರು ಏರುತ್ತಿದ್ದು, ನದಿಬಾಗದ ಗ್ರಾಮಸ್ಥರು ಕೋಡಿಯನ್ನು ಕಡಿದು ಹಳ್ಳದ ನೀರು ಸಮುದ್ರ ಸೇರಲು ಅನುವು ಮಾಡಿಕೊಟ್ಟರು. ಬೇಸಿಗೆಯ ಸಂದರ್ಭದಲ್ಲಿ ಹಳ್ಳ ಹರಿದು ಸಮುದ್ರ ಸೇರುವ ಕೋಡಿಯು ಅಲೆಯ ರಭಸಕ್ಕೆ ಉಸುಕಿನಿಂದ ಮುಚ್ಚಿ ಹೋಗುತ್ತದೆ. ಆದರೆ, ವಂದಿಗೆ, ಹೊಸಗದ್ದೆ, ಬೆಟ್ಟದ ಮೇಲಿನಿಂದ ಮಳೆಗಾಲದಲ್ಲಿ ಹರಿದು ಬರುವ ನೀರು ಇದೆ ಹಳ್ಳದಿಂದ ಸಮುದ್ರ ಸೇರಬೇಕು. ಮಳೆಗಾಲದಲ್ಲಿ ಹಳ್ಳದಲ್ಲಿ ನೀರು ಹೆಚ್ಚುವುದರಿಂದ ನೀರು ನಿಂತು ಕೆಲವು ಮನೆ, ಗದ್ದೆಗಳಿಗೆ ನೀರು ನುಗ್ಗುತ್ತದೆ. ಅದನ್ನು ತಪ್ಪಿಸಲು ಗ್ರಾಮಸ್ಥರು ಶ್ರಮದಾನದ ಮೂಲಕ ಕೋಡಿ ಕಡಿಯುವ ಕಾರ್ಯವನ್ನು ಪ್ರತಿ ವರ್ಷ ಮಾಡುತ್ತಾರೆ. ಕೋಡಿಯಲ್ಲಿರುವ ಉಸುಕನ್ನು ತೆರವು ಮಾಡಿ ಹಳ್ಳದ ಹಿನ್ನೀರನ್ನು ಸಮುದ್ರದ ಒಡಲಿಗೆ ಸೇರಿಸುತ್ತಾರೆ.
ಮಂಗಳವಾರ ಹಾಗೂ ಬುಧವಾರ ಭಾರಿ ಮಳೆಯಾದ ಕಾರಣ ಮನೆಗಳಿಗೆ ಹಾಗೂ ಕೃಷಿ ಪ್ರದೇಶಗಳಿಗೆ ನೀರು ನುಗ್ಗಲಾರಂಭಿಸಿದ್ದು, ಬುಧವಾರ ಮಧ್ಯಾಹ್ನ ಗ್ರಾಮದ ಯುವಕರು, ಹಿರಿಯರು ಕೂಡಿಕೊಂಡು ಕೋಡಿ ಕಡಿಯುವ ಕಾಯಕ ಮಾಡಿದ್ದಾರೆ. ಇದು ನಾಲ್ಕು ಗ್ರಾಪಂ ಅವರಿಗೆ ಸಂಬಂಧಿಸಿದ್ದಾದರೂ ಒಂದೇ ಗ್ರಾ.ಪಂ. ಮಾತ್ರ ಅಲ್ಪ ಅನುದಾನ ನೀಡುತ್ತದೆ. ಸ್ಥಳೀಯ ಬೊಬ್ರವಾಡ ಗ್ರಾಪಂ ಕೋಡಿ ಕಡಿಯುವುದಕ್ಕೆ ಹತ್ತು ಸಾವಿರ ರೂ. ಸಹಾಯಧನ ನೀಡುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.