ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ನೀಡುವ ‘ಅಂಕಿತ ಪುಸ್ತಕ ವರ್ಷದ ಲೇಖಕಿ ಪ್ರಶಸ್ತಿ’ ಪ್ರಕಟವಾಗಿದ್ದು, 2022ನೇ ಸಾಲಿಗೆ ‘ಬಾನು ಮುಷ್ತಾಕ್’ 2023ನೇ ಸಾಲಿಗೆ ಡಾ. ಎಚ್.ಎಸ್. ಅನುಪಮಾ ಹಾಗೂ 2024ನೇ ಸಾಲಿಗೆ ಪ್ರತಿಭಾ ನಂದಕುಮಾರ್ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು 35 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ನಗರದ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಜೂ. 30ರಂದು ಬೆಳಗ್ಗೆ 10.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಅಂಕಿತ ಪುಸ್ತಕ ಪ್ರಕಾಶನ ಸಂಸ್ಥೆಯು ಕರ್ನಾಟಕ ಲೇಖಕಿಯರ ಸಂಘದಲ್ಲಿ ದತ್ತಿನಿಧಿ ಇರಿಸಿದ್ದು, ಪ್ರತಿ ವರ್ಷ ಸಾಹಿತ್ಯದಲ್ಲಿ ಗುರುತರ ಕೆಲಸ ಮಾಡಿದ ಲೇಖಕಿಯರನ್ನು ಗುರುತಿಸಿ ಈ ಪುರಸ್ಕಾರ ನೀಡಲಾಗುತ್ತಿದೆ ಎಂದು ಸಂಘದ ಅಧ್ಯಕ್ಷೆ ಡಾ. ಎಚ್.ಎಲ್. ಪುಷ್ಪ ತಿಳಿಸಿದ್ದಾರೆ.