ಜಿಲ್ಲೆ

ಹೆಚ್ಚು ಲಾಭ ಗಳಿಕೆಗೆ ರೈತರಿಗೆ ಅವಕಾಶ

ಶಿವರಾಜ.ಎಂ

ಬಮುಲ್ ಅಧ್ಯಕ್ಷ ಎಚ್.ಪಿ.ರಾಜಕುಮಾರ್ ಹೇಳಿಕೆ

ವಿಜಯವಾಣಿ ಸುದ್ದಿಜಾಲ ಆನೇಕಲ್
ಡೇರಿಗಳಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲು ಪ್ರಾದೇಶಿಕ ಸಭೆ ನಡೆಸಲಾಗುತ್ತಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರು ಸಭೆಯಲ್ಲಿ ಡೇರಿಗಳ ಸಮಸ್ಯೆಗಳ ಬಗ್ಗೆ ತಿಳಿಸಿದ್ದು, ಶೀಘ್ರದಲ್ಲಿ ಅವುಗಳನ್ನು ನಿವಾರಿಸಲಾಗುವುದು ಎಂದು ಬಮುಲ್ ಅಧ್ಯಕ್ಷ ಎಚ್.ಪಿ.ರಾಜಕುಮಾರ್ ಹೇಳಿದರು.
ಪಟ್ಟಣದಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಪ್ರಾದೇಶಿಕ ಸಭೆಯಲ್ಲಿ ಮಾತನಾಡಿದರು.
ಬಮುಲ್ ರೈತಸ್ನೇಹಿ ಒಕ್ಕೂಟವಾಗಿದ್ದು, ರೈತರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆ ಕಡಿಮೆಯಾಗುತ್ತಿದ್ದು, ಹೈನುಗಾರಿಕೆಗೆ ಅಗತ್ಯವಿರುವ ಸೌಲಭ್ಯ ಮತ್ತು ಮಾರ್ಗದರ್ಶನ ನೀಡುವುದರಿಂದ ರೈತರು ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತದೆ. ಬಮುಲ್‌ನ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಬಮುಲ್‌ನ ಎಲ್ಲ ಲಾಭಾಂಶವು ರೈತರ ಹಿತಕ್ಕಾಗಿ ಬಳಸಲಾಗುವುದು. ರೈತರು ರಾಸು ವಿಮೆಗಳನ್ನು ಮಾಡಿಸಿಕೊಳ್ಳಬೇಕು. ಇದರಿಂದಾಗಿ ರಾಸುಗಳು ಮೃತಪಟ್ಟಾಗ ವಿಮೆಯ ಮೂಲಕ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಬಮುಲ್ ವ್ಯಾಪ್ತಿಯ ಎಲ್ಲ ಶಿಬಿರ ಕಚೇರಿಗಳಲ್ಲಿ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಆ.1ರಿಂದ ಪ್ರತಿ ಲೀ.ಹಾಲಿನ ದರವನ್ನು 3 ರೂ.ಗೆ ಹೆಚ್ಚಿಸಲಾಗಿದ್ದು, ಈ ಹೆಚ್ಚುವರಿ ಹಣವನ್ನು ಒಕ್ಕೂಟದ ಮೂಲಕ ರೈತರಿಗೆ ನೀಡಲಾಗುವುದು. 5 ರೂ.ಗಳನ್ನು ಏರಿಕೆ ಮಾಡುವಂತೆ ವಿವಿಧ ಒಕ್ಕೂಟಗಳು ಒತ್ತಾಯಿಸಿದ್ದವು. ರೈತರು ಮತ್ತು ಗ್ರಾಹಕರ ಹಿತದೃಷ್ಟಿಯಿಂದ 3 ರೂ.ಗಳನ್ನು ಏರಿಕೆ ಮಾಡಲಾಗಿದೆ. ಬಮುಲ್ ವ್ಯಾಪ್ತಿಯಲ್ಲಿ 2,275 ಡೇರಿಗಳಿದ್ದು, ಪ್ರತಿ ದಿನ 16 ಲಕ್ಷ ಲೀ. ಹಾಲು ಪೂರೈಸಲಾಗುತ್ತಿದೆ ಎಂದರು.
ಬಮುಲ್ ನಿರ್ದೇಶಕ ಬಿ.ಜಿ.ಆಂಜಿನಪ್ಪ ಮಾತನಾಡಿ, ಬೆಂಗಳೂರು ಹಾಲು ಒಕ್ಕೂಟದ ರೈತರ ಮತ್ತು ರೈತರ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ನೆರವನ್ನು ನೀಡಲಾಗುತ್ತಿದೆ. ವಿಮೆ, ಯಂತ್ರಗಳು ಸೇರಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ರೈತರ ಮಕ್ಕಳು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸೇರಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.
ತಾಲೂಕಿನ ವಿವಿಧ ಡೇರಿಗಳ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಯಲ್ಲಿ ಸಮಸ್ಯೆಗಳನ್ನು ಅಧಿಕಾರಿಗಳಿಗೆ ತಿಳಿಸಿದರು.