ಕಡೂರು: ತಾಲೂಕಿನ ಕುಂಕನಾಡು ಗ್ರಾಮದ ಆಂಜನೇಯ ಸ್ವಾಮಿ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.
ಕಳೆದ ಗುರುವಾರದಿಂದ ಆರಂಭಗೊಂಡಿರುವ ಜಾತ್ರಾ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಶನಿವಾರ ಆಂಜನೇಯಸ್ವಾಮಿ ಹಾಗೂ ಅಂತರಘಟ್ಟೆ ದೇವಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಿ ನಂತರ ಅಲಂಕೃತಗೊಂಡ ರಥದಲ್ಲಿ ಸ್ವಾಮಿಯನ್ನು ಪ್ರತಿಷ್ಟಾಪಿಸಲಾಯಿತು. ಬಲಿ ಪ್ರಧಾನ ಪೂಜೆ ನೆರವೇರಿಸಿದ ಬಳಿಕ ನೆರೆದಿದ್ದ ಸುತ್ತಮುತ್ತಲ ಗ್ರಾಮದ ಭಕ್ತರು ಸಂಭ್ರಮದಿಂದ ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು. ದೇವಸ್ಥಾನದ ವತಿಯಿಂದ ದಾಸೋಹದ ವ್ಯವಸ್ಥೆ ಕಲ್ಪಿಸಲಾಯಿತು. ರಾತ್ರಿ ಭಜನಾ ಕಾರ್ಯಕ್ರಮಗಳು ಜರುಗಿದವು. ದೇವಾಲಯ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.